ಬಂಟ್ವಾಳ: ತಾಲೂಕಿನ ಮೇರಮಜಲು ಗ್ರಾ ಪಂ ವ್ಯಾಪ್ತಿಯ ಕೊಡ್ಮಾಣ್ ಪೈಕ ಸಮೀಪ ಶ್ವಾನಗಳ ಬಿಸ್ಕೆಟ್ ತಯಾರಿಸುವ ಘಟಕದಿಂದ ದುರ್ನಾತ ಬರುವ ಜೊತೆಗೆ ಅರೋಗ್ಯಕ್ಕೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬಂಟ್ವಾಳ ತಾ ಪಂ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಕಾಂಬ್ಳೆ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಂಪೆನಿಯನ್ನು ಮುಚ್ಚುವಂತೆ ಆದೇಶಿಸಿದರು.
ಘಟಕಕ್ಕೆ ಹಿಂದೆ ಮೇರಮಜಲು ಪಂಚಾಯತ್ ಪರವಾನಿಗೆ ಕೊಟ್ಟಿದ್ದು, ಆದರೆ ಕಳೆದ ಕೆಲವು ವರ್ಷಗಳಿಂದ ಪರವಾನಿಗೆ ನವೀಕರಣಗೊಳ್ಳದೇ ಇದ್ದರೂ ಕಂಪೆನಿಯು ಅನಧಿಕೃತವಾಗಿ ಕಾರ್ಯಾಚರಿಸುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನಲ್ಲಿ ಪರಿಸರದಲ್ಲಿ ದುರ್ನಾತ ಬೀರಿ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸಿ, ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಿತ್ತು.
ತಾ.ಪಂ.ಇಒ ಅವರು ಸ್ಥಳ ಪರಿಶೀಲನೆ ಮಾಡಿದ್ದು, ಆ ವೇಳೆಯೂ ದುರ್ನಾತ ಬೀರುತ್ತಿತ್ತು. ಪರವಾನಿಗೆ
ಅವಧಿ ಮುಗಿದರೂ, ಅನಧಿಕೃತವಾಗಿ ಕಾರ್ಯಮುಂದುವರಿಸಿದ ಸಂಸ್ಥೆಯ ಮಾಲಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಘಟಕವನ್ನು ಈಗಿಂದಲೇ ಮುಚ್ಚುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದರು.
ಮೆರಮಜಲು ಗ್ರಾ ಪಂ ಅಧ್ಯಕ್ಷ ಸತೀಶ್ ನಾಯ್ಗ, ಉಪಾಧ್ಯಕ್ಷೆ ಚೆನ್ನಮ್ಮ, ತಾಲೂಕು ಪಂಚಾಯತ್ಎಡಿ ವಿಶ್ವನಾಥ್, ಆರೋಗ್ಯ ಅಧಿಕಾರಿಗಳು, ಪಿಡಿಒ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









