ಬೆಂಗಳೂರು:ಸರ್ಕಾರಿ ಸಭೆ ಸಮಾರಂಭಗಳಲ್ಲಿ ಹೂಗುಚ್ಚ, ಹಾರ, ತುರಾಯಿ ಹಣ್ಣಿನ ಬುಟ್ಟಿ ನಿಷೇಧದ ಆದೇಶವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘಗಳ ವತಿಯಿಂದ ನಾಳೆ ಗುರುವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘ, ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಹಾಗೂ ಪುಷ್ಪ ಬೆಳೆಗಾರರ ರೈತ ಸಂಘಟನೆಗಳು, ಎಲ್ಲಾ ಪುಷ್ಪ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘಗಳ ವತಿಯಿಂದ ಗುರುವಾರ ಆಗಸ್ಟ್ 12 ರಂದು ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.ಹೂ ಗುಚ್ಛ, ಹಾರ ಮತ್ತು ಹಣ್ಣಿನ ಬುಟ್ಟಿ ಹಿಡಿದು ವಿನೂತನ
ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷರಾದ ಟಿ ಎಂ ಅರವಿಂದ್ ತಿಳಿಸಿದ್ದಾರೆ.
ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು ಸರಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂದಕ್ಕೆ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.















