Coastal Bulletin

ಬೆಂಗಳೂರು: ಡ್ರಗ್​ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅನುಶ್ರೀ ಮುಂಬೈಗೆ ಹಾರಿದ್ದರು.ಇಂದು ಮುಂಬೈಯಿಂದ ವಾಪಸಾದ ಅನುಶ್ರೀ ಪ್ರಕರಣಕ್ಕೆ ಸಂಬಂಧಿಸಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.

'ಮಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಕಿಶೋರ್ ಅಮನ್ ಶೆಟ್ಟಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಆರೋಪಿಗಳು ಸಾವಿರ ಹೇಳುತ್ತಾರೆ. ಹೇಳಿಕೆಯಲ್ಲಿ ಏನು ಬೇಕಾದರೂ ಹೇಳಬಹುದು. ಪೊಲೀಸರು ಯಾವು ಸತ್ಯ, ಸುಳ್ಳು ಎನ್ನುವುದನ್ನು ಪರಿಶೀಲನೆ ಮಾಡುತ್ತಾರೆ.ಕಳೆದ ಬಾರಿ ವಿಚಾರಣೆಗೆ ಕರೆದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟಿದ್ದೇನೆ. ನನಗೆ ಯಾರ ಸಹಾಯವೂ ಬೇಕಿಲ್ಲ. ಮೂರು ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದೆ. ಯಾವ ಪ್ರಭಾವಶಾಲಿಗಳಿಗೂ ನಾನು ಕರೆ ಮಾಡಿಲ್ಲ. ಯಾರ ಸಹಾಯವನ್ನೂ ತೆಗೆದುಕೊಂಡಿಲ್ಲ' ಎಂದಿದ್ದಾರೆ.

'ನಾನು ಭಯಪಟ್ಟುಕೊಂಡು ಓಡಿಹೋಗಿದ್ದೇನೆ ಎಂಬ ಸುದ್ದಿಕ ಹರಿದಾಡುತ್ತಿದೆ. ಕೆಲಸದ ನಿಮಿತ್ತ ಬೆಂಗಳೂರಿನಿಂದ ಮುಂಬೈಗೆ ನಾನು ಸೋಮವಾರವೇ ಹೋಗಿದ್ದೆ.ನಾನು ಎಲ್ಲಿಯೂ ಹಾರಿಹೋಗಿಲ್ಲ. ಇದು ನನ್ನ ನೆಲ. ಯಾವ ಆರೋಪಗಳು ಬಂದರೂ ನಾನು ಎದುರಿಸುತ್ತೇನೆ. ಮತ್ತೆ ವಿಚಾರಣೆಗೆ ಕರೆದರೆ ಖಂಡಿತಾ ಹಾಜರಾಗುತ್ತೇನೆ. ಈ ಬೆಳವಣಿಗೆಯ ಬಗ್ಗೆ ನನಗೆ ಬೇಜಾರಿದೆ. ಯಾವುದೂ ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸುವುದಿಲ್ಲ.

ನಾನು ಬಹಳ ಸರಳ ವ್ಯಕ್ತಿ. ನಾನು ಯಾವ ಪಾರ್ಟಿ, ಪಬ್‌ಗಳಿಗೆ ಹೋಗುವುದಿಲ್ಲ. ಯಾಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ನಾನು ಸತ್ಯವಾಗಿದ್ದೇನೆ' ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರ್ಗಿ ಹೇಳಿಕೆಗಳ ವಿಚಾರದಲ್ಲೂ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಪ್ರಶಾಂತ್​ ಸಂಬರಗಿ ಅವರು ಕಾನೂನು ಮೂಲಕ ಹೋಗಲಿ. ನಮ್ಮ ಸಮಾಜದಲ್ಲಿ ಕಾನೂನು ಇದೆ. ಎಲ್ಲ ವಿಚಾರಗಳಿಗೆ ಆಗಲೂ ಉತ್ತರ ಕೊಟ್ಟಿದ್ದೇನೆ, ಈಗಲೂ ಉತ್ತರ ಕೊಡುತ್ತಿದ್ದೇನೆ’ ಎಂದಿದ್ದಾರೆ.

ಕೋಟ್ಯಾಂತರ ರೂ ಮೌಲ್ಯದ ಆಸ್ತಿಗೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅನುಶ್ರೀ, 'ಹೌದು ನನ್ನ ಮನೆ ಓರಾಯನ್ ಮಾಲ್ ಎದುರಿಗೇ ಇದೆ. ಆದರೆ ಅದು ಬಾಡಿಗೆ ಮನೆ. ಇಡೀ ಕಟ್ಟಡವೇನೂ ನನ್ನದಲ್ಲ.ಕಳೆದ ಆರು ವರ್ಷದಿಂದ ಬಾಡಿಗೆ ಕಟ್ಟುತ್ತಿದ್ದೇನೆ. ಈ ಕುರಿತು ಮನೆ ಮಾಲೀಕರನ್ನೇ ಕೇಳಬಹುದು. ಮಂಗಳೂರಿನ ಕದ್ರಿಯಲ್ಲಿ ಒಂದು ಮನೆ ಇದೆ. ಅದರ ಸಾಲ ಇನ್ನೂ ಬಾಕಿ ಇದೆ' ಎಂದಿದ್ದಾರೆ.

Leave a Comment