ತಮಿಳು ನಟ ಕಮಲ್ ಹಾಸನ್ (Kamal Haasan) ವಿವಾದಾತ್ಮಕ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಆದರೆ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕಮಲ್ ಹಾಸನ್ ಉದ್ಧಟತನ ತೋರಿದ್ದಾರೆ. ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದಿದ್ದಾರೆ. ಇತ್ತ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ತೀವ್ರಗೊಂಡಿದ್ದು, ಅವರ ಸಿನಿಮಾ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ನಟ ಕಮಲ್ ವಿರುದ್ಧ ಕನ್ನಡಿಗರ ಆಕ್ರೋಶ ಕಟ್ಟೆಯೊಡೆದಿದೆ. ಕರವೇ (Karnataka Rakshana Vedike) ಬಣ, ಕನ್ನಡ ಸಂಘಟನೆಗಳು ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂಭಾಗ ಪ್ರತಿಭಟನೆ ನಡೆಸಿತು. ಕಮಲ್ ಹಾಸನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು.
ಕಮಲ್ ಚಿತ್ರ ರಾಜ್ಯದಲ್ಲಿ ಬಿಡುಗಡೆ ಸಂಬಂಧ ಫಿಲಂ ಚೇಂಬರ್‌ನಲ್ಲಿ (Film Chamber) ಸಭೆ ನಡೆಯುತ್ತಿದ್ದ ವೇಳೆಯೇ ಫಿಲಂ ಚೇಂಬರ್‌ಗೆ ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿದರು. ಕರವೇ ನಾರಾಯಣಗೌಡರ ಬಣ ಮುತ್ತಿಗೆ ಹಾಕಿ ಕಮಲ್ ಕ್ಷಮೆ ಕೇಳೋವರೆಗೂ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹಿಸಿದರು. ಫಿಲಂ ಚೇಂಬರ್ ಒಳಗೆ ನುಗ್ಗಿ ಅಧ್ಯಕ್ಷರ ಮುಂದೆ ಕೂತು ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನಿಮಾ ರಿಲೀಸ್ ಆಗಲು ಬಿಡಲ್ಲ. ಸಿನಿಮಾ ಬಿಡುಗಡೆ ಮಾಡುತ್ತಿರುವ ಡಿಸ್ಟ್ರಿಬ್ಯೂಟರ್ ಅವರಿಗೆ ವಾರ್ನಿಂಗ್ ಕೊಡುತ್ತೇವೆ, ಫಿಲಂ ಚೇಂಬರ್ ಚಿತ್ರ ರಿಲೀಸ್ ಆಗೋಕೆ ಬಿಡಬಾರದು ಎಂದು ಮನವಿ ಮಾಡಿದರು.
ಇನ್ನು ಕನ್ನಡದ ಬಗ್ಗೆ ಕಮಲ್ ಹಾಸನ್ ಅವಿವೇಕದ ಮಾತಾಡಿದ್ದಾರೆ. ಅವರ ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗಬಾರದು. ಕರ್ನಾಟಕದ ಅನ್ನ ತಿಂದ ಕನ್ನಡ ನಟರು ಇದರ ಬಗ್ಗೆ ಧ್ವನಿಯೆತ್ತಬೇಕು. ಕಮಲ್ ಹಾಸನ್ ವಿರುದ್ಧ ಕನ್ನಡ ನಟ-ನಟಿಯರು ಯಾಕೆ ಧ್ವನಿ ಎತ್ತಿಲ್ಲ ಎಂದು ಕರವೇ ಶಿವರಾಮೇಗೌಡ ಪ್ರಶ್ನಿಸಿದರು.
ಕಮಲ್ ಹಾಸನ್‌ಗೆ ಮತ್ತೆ ಡೆಡ್‌ಲೈನ್:
ಫಿಲಂ ಚೇಂಬರ್‌ನಲ್ಲಿ ಸಭೆ ಬಳಿಕ ಮಾತಾಡಿದ ಕನ್ನಡ ಹೋರಾಟಗಾರ, ಕರ್ನಾಟಕ ಚಲನಚಿತ್ರ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಕಮಲ ಹಾಸನ್‌ಗೆ ಮತ್ತೆ ಡೆಡ್‌ಲೈನ್ ಕೊಟ್ಟಿದ್ದಾರೆ. ಕಮಲ್ ಹಾಸನ್ ಬಗ್ಗೆ ನಮಗೆ ಯಾರಿಗೂ ಕನಿಕರ ಇಲ್ಲ.
ಇಂದು ಅಥವಾ ನಾಳೆ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಮಾಡಿಕೊಡಲ್ಲ. ಕ್ಷಮಾಪಣೆ ಅಂತಾ ಪದ ಬರದಿದ್ದರೆ ಸಿನಿಮಾ ರಿಲೀಸ್ ಮಾಡೋಕೆ ಬಿಡಲ್ಲ ಎಂದು ಗುಡುಗಿದರು. ಇನ್ನು ಡಿಸ್ಟ್ರಿಬ್ಯೂಟರ್ ವೆಂಕಟೇಶ್ ಮಾತನಾಡಿ, ಕನ್ನಡ ಹಾಗೂ ಬ್ಯುಸಿನೆಸ್ ಎರಡೂ ನನಗೆ ಇಂಪಾರ್ಟೆಂಟ್. ಫಿಲಂ ಚೇಂಬರ್ ಸಭೆಯಲ್ಲಿ ಏನೇನು ಆಯ್ತು ಎಲ್ಲವನ್ನು ಕಮಲ್‌ಗೆ ಹೇಳುತ್ತೇನೆ ಎಂದು ತಿಳಿಸಿದರು.
ನಟ ಕಮಲ್ ಹಾಸನ್ ವಿವಾದದ ಬಗ್ಗೆ ನಟ ಶಿವರಾಜ್ ಕುಮಾರ್ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಕನ್ನಡದ ಬಗ್ಗೆ ಕಮಲ್ ಹಾಸನ್‌ಗೆ ಪ್ರೀತಿ ಇದೆ. ನಟ ಕಮಲ್ ಹಾಸನ್‌ಗೆ ಇದೆಲ್ಲ ಗೊತ್ತಾಗುತ್ತೆ. ಕಮಲ್ ಅವರೇ ಅದನ್ನ ಸರಿ ಮಾಡಿಕೊಳ್ಳುತ್ತಾರೆ. ಬರೀ ಬಾಯಿ ಮಾತಲ್ಲಿ ಮಾತ್ರ ಕನ್ನಡ ಎನ್ನಬಾರದು. ಕನ್ನಡಕ್ಕಾಗಿ ಸಾಯುತ್ತೀವಿ, ಹೋರಾಟ ಮಾಡ್ತೇವೆ ಎಂದಿದ್ದಾರೆ.
ಇನ್ನು ಕಮಲ ಹಾಸನ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ನಟಿ ಜಯಮಾಲಾ, ಕಮಲ್ ಹಾಸನ್‌ಗೆ ಅವರ ತಪ್ಪು ಮನವರಿಕೆ ಮಾಡಬೇಕು. ಅವರು ತಿಳಿದು ಹೇಳಿದ್ರೋ, ತಿಳಿಯದೇ ಹೇಳಿದ್ರೋ ಗೊತ್ತಿಲ್ಲ. ಒಂದಂತೂ ಸತ್ಯ. ತಮಿಳಿನಿಂದ ಕನ್ನಡ ಹುಟ್ಟಿಲ್ಲ. ಅವರು ಕ್ಷಮೆ ಕೇಳಬೇಕು. ಇನ್ನು ಕಮಲ್ ಹೀಗೆಲ್ಲಾ ಮಾತನಾಡುವಾಗ ಶಿವಣ್ಣ ಸುಮ್ಮನಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಣ್ಣ ಅವರಿಗೆ ಅವತ್ತು ಗೊತ್ತಾಗಿಲ್ಲ. ಆರೋಗ್ಯ ದೃಷ್ಟಿಯಿಂದ ಸ್ವಲ್ಪ ಕುಗ್ಗಿದ್ದಾರೆ. ಹೀಗಾಗಿ ಗೊತ್ತಾಗಿಲ್ಲ ಎಂದು ಹೇಳಿದರು.
ಇತ್ತ ನಟ ಕಮಲ್ ಹಾಸನ್ ಚಲನಚಿತ್ರಗಳನ್ನ ಕರ್ನಾಟಕದಲ್ಲಿ ನಿರ್ಬಂಧಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಫಿಲಂ ಚೇಂಬರ್‌ಗೆ ಪತ್ರ ಬರೆದಿದ್ದಾರೆ.














