Coastal Bulletin

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌.ಕೆ. ಭಗವಾನ್‌ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕನ್ನಡ ಮೊದಲ ಜೇಮ್ಸ್ ಬಾಂಡ್ ಸಿನಿಮಾ ಮಾಡಿರೋ ನಿರ್ದೇಶಕ ಭಗವಾನ್‌ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವತ್ತು ಅವರ ಹುಟ್ಟುಹಬ್ಬ, ಆದರೆ ಬೆಳಗ್ಗೆ 6 ಗಂಟೆಗೆ ಇಂದೇ ಮೃತಪಟ್ಟಿದ್ದಾರೆ. ಇವರಿಗೆ 94 ವರ್ಷ ವಯಸ್ಸಾಗಿತ್ತು. ಹಲವು ತಿಂಗಳಿಂದ ಎಸ್‌.ಕೆ. ಭಗವಾನ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ಡಿಸೆಂಬರ್‌ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಅವರ ಜೋಡಿ ದೊರೈ-ಭಗವಾನ್ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರೂ ಸೇರಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸದಭಿರುಚಿಯ ಚಿತ್ರಗಳ ಮೂಲಕ ಮನೆ ಮಾತಾಡಿದ್ದ ಭಗವಾನ್,  24 ಕಾದಂಬರಿಗಳನ್ನು ಸಿನೆಮಾವಾಗಿಸಿ ತೆರೆಗೆ ತಂದಿದ್ದರು. ನಿದೇರ್ಶನ ಮಾತ್ರವಲ್ಲದೆ ಹಲವು ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. 

ಎಸ್. ಕೆ. ಭಗವಾನ್ ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಮತ್ತು ಕಾದಂಬರಿ ಆಧಾರಿತ ಚಲನಚಿತ್ರಗಳ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ. ಅವರ ನಿಜವಾದ ಹೆಸರು ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಆಗಿದೆ. ನಟನೆಯತ್ತ ಆಕರ್ಷಿತರಾಗಿದ್ದ ಎಸ್.ಕೆ.ಭಗವಾನ್ ಅವರು ‘ಹಿರಣ್ಣಯ್ಯ ಮಿತ್ರ ಮಂಡಳಿ’ಯಲ್ಲಿ ಆರಂಭದಲ್ಲಿ ನಾಟಕ ಮಾಡುತ್ತಿದ್ದರು.  ನಂತರ,1956 ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಎಸ್.ಕೆ.ಭಗವಾನ್ ತಮ್ಮ ಸಿನಿಮಾ ಪ್ರಯಾಣ ಆರಂಭಿಸಿದರು ಎಂದು ವರದಿಯಾಗಿದೆ. 

'ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ವಸಂತ ಗೀತ’, ‘ಆಪರೇಷನ್ ಡೈಮಂಡ್ ರಾಕೆಟ್’, ‘ಹೊಸ ಬೆಳಕು’, ‘ಯಾರಿವನು’

ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ದೊರೈ - ಭಗವಾನ್‌ ಜೋಡಿಯು ನಿರ್ದೇಶಿಸಿದ್ದಾರೆ. ಇವರ ಸುಮಾರು 30 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದು, ಅಣ್ಣಾವ್ರ ಬಗ್ಗೆ ಭಗವಾನ್‌ ಅವರು ಉತ್ತಮ ಬಾಂಧವ್ಯ ಹಾಗೂ ಗೌರವ ಹೊಂದಿದ್ದರು. ಇನ್ನು, ಇವರ ಕೆಲವು ಚಿತ್ರಗಳಲ್ಲಿ ಅನಂತನಾಗ್ ಮತ್ತು ಲಕ್ಷ್ಮೀ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.

ಡಾ. ರಾಜ ಕುಮಾರ್, ಉದಯ್‌ ಕುಮಾರ್‌, ನರಸಿಂಹರಾಜು, ಲಕ್ಷ್ಮೀ, ಆರತಿ, ಜಯಂತಿ, ರಾಜೇಶ್‌, ಕಲ್ಪನಾ, ಮಂಜುಳಾ, ಅನಂತ್ ನಾಗ್‌, ಶಂಕರ್‌ ನಾಗ್‌, ಬಿ. ಸರೋಜಾ ದೇವಿ, ಡಾ. ವಿಷ್ಣುವರ್ಧನ್‌, ಮಾಲಾಶ್ರೀ, ಅಂಬರೀಷ್‌, ಪುನೀತ್‌ ರಾಜಕುಮಾರ್‌ ಹಾಗೂ ಇತರೆ ಖ್ಯಾತ ನಟರು ಮತ್ತು ನಟಿಯರ ಜತೆಗೆ ಎಸ್‌.ಕೆ. ಭಗವಾನ್‌ ಕೆಲಸ ಮಾಡಿದ್ದಾರೆ. 

 ಎಸ್.ಕೆ ಭಗವಾನ್ ಸಿನಿಮಾ ರಂಗದಲ್ಲಿ 65 ವರ್ಷದ ಸುದೀರ್ಘ ಅನುಭವವನ್ನೂ ಹೊಂದಿದ್ದು, ದೊರೈರಾಜರ ಮರಣದ ನಂತರ ಎಸ್‌.ಕೆ. ಭಗವಾನ್‌ ನಿರ್ದೇಶನದಿಂದ ನಿವೃತ್ತಿ ಹೊಂದಿದ್ದರು. ’ಮಾಂಗಲ್ಯ ಬಂಧನ’ ದೊರೈ-ಭಗವಾನ್ ಜೋಡಿ ನಿರ್ದೇಶನದ ಕೊನೆಯ ಚಿತ್ರ ಎಂದು ತಿಳಿದುಬಂದಿದೆ. 

Leave a Comment