ನಟ ಶಾರುಖ್ ಖಾನ್ ಅವರಿಗೆ ಬಾಲಿವುಡ್ ಸಿನಿಮಾಗಳಲ್ಲಿ ಗೆಲುವು ಕಾಣದೇ ಬಹಳ ವರ್ಷಗಳಾಗಿವೆ. 2018ರಲ್ಲಿ ಬಂದ ‘ಜೀರೋ’ ಸಿನಿಮಾ ಹೀನಾಯವಾಗಿ ಸೋತ ಬಳಿಕ ಅವರು ನಾಲ್ಕು ವರ್ಷ ಬ್ರೇಕ್ ತೆಗೆದುಕೊಂಡರು. ಈಗ ‘ಪಠಾಣ್’ ಚಿತ್ರದ ಮೂಲಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾ 2023ರ ಜನವರಿ 25ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮುನ್ನವೇ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ‘ಬೇಷರಂ ರಂಗ್..’ ಹಾಡು ಬಿಡುಗಡೆಯಾದ ಬೆನ್ನಲ್ಲೇ ಪರ-ವಿರೋಧದ ಚರ್ಚೆ ಜೋರಾಗಿದೆ. ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಲಾಗಿದೆ. ಟ್ವಿಟರ್ನಲ್ಲಿ #BoycottPathan ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ.
ಶಾರುಖ್ ಖಾನ್ ಅವರು ಏನೇ ಮಾಡಿದರೂ ಒಂದು ವರ್ಗದ ನೆಟ್ಟಿಗರು ಅದನ್ನು ವಿರೋಧಿಸುತ್ತಾರೆ. ಅದು ಅವರ ಸಿನಿಮಾಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸಾಕಷ್ಟು ಕಷ್ಟಪಟ್ಟು ಶಾರುಖ್ ಅವರು ‘ಪಠಾಣ್’ ಚಿತ್ರ ಮಾಡಿದ್ದಾರೆ. ಇದರ ಮೇಲೆ ಅವರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆದರೆ ಬಹಿಷ್ಕಾರದ ಬಿಸಿಯಿಂದಾಗಿ ಈ ಸಿನಿಮಾಗೆ ಸೋಲಿನ ಭಯ ಎದುರಾಗಿದೆ.
ಸಿದ್ದಾರ್ಥ್ ಆನಂದ್ ಅವರು ‘ಪಠಾಣ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಜಾನ್ ಅಬ್ರಾಹಂ ಅಭಿನಯಿಸಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಫ್ಯಾನ್ಸ್ಗೆ ‘ಬೇಷರಂ ರಂಗ್..’ ಹಾಡು ಕೂಡ ಮೆಚ್ಚುಗೆ
ಆಗಿದೆ. ಆದರೆ ಟ್ರೋಲ್ ಮಾಡುವವರು ಮಾತ್ರ ಈ ಹಾಡನ್ನು ಟಾರ್ಗೆಟ್ ಮಾಡಿದ್ದಾರೆ.
ಯಶ್ ರಾಜ್ ಫಿಲ್ಮ್ಸ್’ ಬ್ಯಾನರ್ ಮೂಲಕ ‘ಪಠಾಣ್’ ಸಿನಿಮಾ ತಯಾರಾಗಿದೆ. ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಒಂದು ವೇಳೆ ಸಿನಿಮಾ ಸೋತರೆ ಎಲ್ಲ ಪ್ರಯತ್ನವೂ ನೀರಿನಲ್ಲಿ ಹೋಮ ಮಾಡಿದಂತೆ ಆಗಲಿದೆ. ‘ಬೇಷರಂ ರಂಗ್..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂದು ಕೆಲವರು ತಕರಾರು ತೆಗೆದಿದ್ದಾರೆ.
ಸದ್ಯಕ್ಕಂತೂ ಬಾಲಿವುಡ್ ಸಿನಿಮಾಗಳಿಗೆ ಟೈಮ್ ಚೆನ್ನಾಗಿಲ್ಲ. ರಿಲೀಸ್ ಆದ ಬಹುತೇಕ ಚಿತ್ರಗಳು ಸೋಲುತ್ತಿವೆ. ಈ ಸಮಯದಲ್ಲಿ ಬಹಿಷ್ಕಾರದ ಬಿಸಿ ಕೂಡ ತಟ್ಟಿದರೆ ಗಲ್ಲಾ ಪೆಟ್ಟಿಗೆ ಕಲೆಕ್ಷನ್ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ‘ಪಠಾಣ್’ ಚಿತ್ರದ ಭವಿಷ್ಯ ಏನಾಗಬಹುದು ಎಂಬ ಕೌತುಕ ಮೂಡಿದೆ.














