ಬೆಂಗಳೂರು: ಸಾಮಾಜಿಕ ಜಾಲತಾಣವು ಹೆಚ್ಚಾಗಿ ಕೆಟ್ಟದ್ದಕ್ಕೆ, ಇತರರನ್ನು ಟ್ರೋಲ್ ಮಾಡಿ ನಿಂದಿಸಲು, ಬರೀ ನಕಾರಾತ್ಮಕ ವಿಚಾರಗಳಿಗೆ ಬಳಕೆ ಆಗುತ್ತಿದೆ ಎಂದನಿಸುತ್ತದೆ. ನಟ, ನಟಿಯರ ಫೋಟೋ, ವಿಡಿಯೋ ಇಟ್ಟುಕೊಂಡು ಕೆಟ್ಟ ಭಾಷೆಯಿಂದ ಟ್ರೋಲ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇತ್ತೀಚೆಗೆ ಸ್ಟಾರ್‌ನಟನ ಬಂಧನ ಬಳಿಕ ಇಂತಹ ಘಟನೆಗಳು ಹೆಚ್ಚಾಗಿವೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಡೀಪ್ ಫೇಕ್ ಫೋಟೋ ವೈರಲ್ ಆಗಿದ್ದು, ರಾಜವಂಶದ ಅಭಿಮಾನಿಗಳು ಇದರ ವಿರುದ್ಧ ದೂರು ನೀಡಿದ್ದಾರೆ.
ರಾಜವಂಶದ ಅಭಿಮಾನಿಗಳು ಅಶ್ವಿನಿ ಪುನೀತ್ ರಾಜಕುಮಾರ್ ಅವರ ವಿರುದ್ಧ ಟ್ರೋಲ್, ಅಸಹ್ಯ ಭಾಷೆ ಬಳಸಿ ಪೋಸ್ಟ್ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ಅಸಹ್ಯಕರ ಪೋಸ್ಟ್ ಹಾಕಿ ನಿಂದಿಸುವ ಕೆಲಸ ಹೆಚ್ಚಾಗುತ್ತಿದೆ. ಅದಕ್ಕಾಗಿ ನಕಲಿ ಖಾತೆ ಬಳಸುತ್ತಿದ್ದಾರೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣದೊಂದಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸುವಂತೆ ವಾಣಿಜ್ಯ
ಮಂಡಳಿಯು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.
ತಾವಾಯಿತು, ತಮ್ಮ ಕೆಲಸವಾಯಿತು ಎಂದುಕೊಂಡಿದ್ದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಯೋಗೆಂದ್ರ ಪ್ರಸಾದ್ ಎಂಬ ಕಿಡಿಗೇಡಿ ಅತೀ ಕೆಟ್ಟ ಭಾಷೆಯಿಂದ ಲೇವಡಿ ಮಾಡಿದ್ದಾನೆ. ಜೊತೆಗೆ ತನ್ನೊಂದಿಗೆ ನಿಂತಿರುವಂತೆ ಅಶ್ವಿನಿಯವರ ಫೋಟೋ ಹಾಕಿಕೊಂಡು ಇಲ್ಲಸಲ್ಲದನ್ನು ಮಾತನಾಡಿದ್ದಾನೆ. ಇದು ಭಾರೀ ವೈರಲ್ ಆಗಿತ್ತು. ಸದ್ಯ ಅಭಿಮಾನಿಗಳು ದೂರು ನೀಡಿದ್ದಾರೆ.















