ಉಳ್ಳಾಲ :ಮನೆ ಮಂದಿ ಮಲಗಿದ್ದ ವೇಳೆ ಮನೆಯ ಹಂಚು ಸರಿಸಿ ಒಳನುಗ್ಗಿ 120 ಗ್ರಾಂ ಚಿನ್ನ ಮತ್ತು ಮೊಬೈಲ್ ಗಳನ್ನ ಕಳವುಗೈದಿದ್ದ ಆರೋಪಿ ಬಂಟ್ವಾಳ ತಾಲೂಕಿನ ನಂದಾವರದ ಉಬೇದುಲ್ಲಾ ( 27 ) ಎಂಬವನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 19 ರಂದು ಬೆಳ್ಳಂಬೆಳಗ್ಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ನಿವಾಸಿ ಜಯರಾಜ್ ಅವರ ಮನೆಯ ಹಿಂಭಾಗದ ಹಂಚು ಸರಿಸಿ ಒಳ ನುಗ್ಗಿ ಮನೆ ಮಂದಿ ನಿದ್ರೆಯ ಮಂಪರಿನಲ್ಲಿರುವಾಗಲೇ ಕೈಚಳಕ ತೋರಿಸಿ ಆರೋಪಿ ಕಪಾಟು ತೆರೆದು 120 ಗ್ರಾಂ ಚಿನ್ನದ ಒಡವೆಗಳು ಹಾಗೂ ಮೂರು ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದ .
ಕದ್ದ ಮೂರು ಮೊಬೈಲ್ ನಲ್ಲಿ ಒಂದನ್ನು ತನ್ನ ಭಾವ ಇಸ್ಮಾಯಿಲ್ ಎಂಬಾತನಿಗೆ ಮಾರಿದ್ದು ಆತ
ಅದಕ್ಕೆ ಸಿಮ್ ಹಾಕಿ ಬಳಕೆ ಮಾಡುತ್ತಿದ್ದ . ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಉಳ್ಳಾಲ ಪೊಲೀಸರು ಕಳವಾಗಿದ್ದ ಮೊಬೈಲ್ ಫೋನಿನ ಐಎಂಇಐ ನಂಬರ್ ಟ್ರೇಸ್ ಮಾಡಿದಾಗ ಆರೋಪಿ ಉಬೇದುಲ್ಲಾನ ಬಗ್ಗೆ ಸುಳಿವು ದೊರೆತಿದ್ದು ಆರೋಪಿಗೆ ಕೋಳ ತೊಡಿಸಿದ್ದಾರೆ.
ಪೊಲೀಸರು ಆರೋಪಿಯಿಂದ ಕಳ್ಳತನ ನಡೆಸಿದ ಚಿನ್ನ ಮಾರಿ ಖರೀದಿಸಿದ ಹೊಸ ಬೈಕ್,90 ಗ್ರಾಂ ಚಿನ್ನ, ಎರಡು ಮೊಬೈಲ್, ಒಂದು ರಿಕ್ಷಾ ವಶಪಡಿಸಿಕೊಂಡಿದ್ದಾರೆ.ಚಾಣಾಕ್ಷತನದಿಂದ ಕಳ್ಳತನ ಭೇದಿಸಿದ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.














