ಡೆತ್​ನೋಟ್​ ಬರೆದಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ; ಮೂವರು ಅಧಿಕಾರಿಗಳ ಮೇಲೆ ಎಫ್​ಐಆರ್

Coastal Bulletin
ಡೆತ್​ನೋಟ್​ ಬರೆದಿಟ್ಟು ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಆತ್ಮಹತ್ಯೆ; ಮೂವರು ಅಧಿಕಾರಿಗಳ ಮೇಲೆ ಎಫ್​ಐಆರ್

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್‌(52) ಎಂಬುವವರು ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್​ನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಮೂವರ ಮೇಲೆ ಕೇಸು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಅಧಿಕಾರಿಗಳಾದ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ಅಧಿಕಾರಿ ಸುಚಿಸ್ಥನಾ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಘಟನೆ ಕುರಿತು ಮಾತನಾಡಿದ ಮೃತ ಚಂದ್ರಶೇಖರ್​ ಪತ್ನಿ ಕವಿತಾ, ‘ ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ, ಲೂಟಿಯನ್ನೂ ಮಾಡಿಲ್ಲ. ಒತ್ತಡ ಹಾಕಿ ನನ್ನ ಪತಿ ಜೀವ ತೆಗೆದಿದ್ದಾರೆ. ಡೆತ್​ನೋಟ್​ನಲ್ಲಿ ಅವರು ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನನ್ನ ಪತಿ ನಿಯತ್ತಿನ ನಾಯಿ ರೀತಿ ಸರ್ಕಾರದ ಕೆಲಸ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ತಾರೆ ಅಂದರೆ ಎಷ್ಟು ಒತ್ತಡ ಇತ್ತು ಊಹೆ ಮಾಡಿ.

ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಗಮನಕ್ಕೆ ಬರದೆ ಏನು ನಡೆದಿಲ್ಲ. ನಿರ್ದೇಶಕರ ಸಹಿ ನಕಲು ಆಗಲು ಸಾಧ್ಯವಿಲ್ಲ. ನನಗೆ ಸರ್ಕಾರದ ಮೇಲೆ ವಿಶ್ವಾಸವಿದೆ, ಪತಿ ಸಾವಿಗೆ ನ್ಯಾಯ ಸಿಗಬೇಕು. ‘ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಜನರು ನೂರೆಂಟು ರೀತಿ ಮಾತನಾಡುತ್ತಾರೆ. ಅದು ನನಗೆ ಬೇಡ, ನನ್ನ ಗಂಡನ ಮೇಲೆ ಯಾವುದೇ ತಪ್ಪಿಲ್ಲ ಎನ್ನುವುದು ನನಗೆ ಬೇಕು. ಅವರು ಅಧಿಕಾರಿ ಆಗಿ ಎಲ್ಲ ಓದಿದ್ದಾರೆ. ಅಂತಹ ವ್ಯಕ್ತಿ ಮೇಲೆ ಒತ್ತಡ ಹಾಕಿದ್ದಾರೆ.  ನಿರ್ದೇಶಕರ

ಸಹಿ ಫೋರ್ಜರಿ ಆಗಲು ಸಾಧ್ಯವಿಲ್ಲ. ನನ್ನ ಪತಿ ಸುಳ್ಳು ಮತ್ತು ಮೋಸ ಮಾಡುವ ಮನುಷ್ಯ ಅಲ್ಲ. ನಾನು ಪತಿ ಜೊತೆ 22 ವರ್ಷ ಸಂಸಾರ ಮಾಡಿರುವೆ. ನಾನು ಎಲ್ಲಿ ಬಂದು ಆದ್ರೂ ಹೇಳುತ್ತೇನೆ. ನನಗೆ ಸರ್ಕಾರದ ಮೇಲೆ ವಿಶ್ವಾಸ ಇದೆ. ಪತಿ ಸಾವಿಗೆ ನ್ಯಾಯ ಸಿಗಬೇಕು ಎಂದು ಕೇಳುತ್ತೇನೆ ಎಂದರು.

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಕುರಿತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಡೆತ್​ನೋಟ್​ನಲ್ಲಿ ಆಶ್ಚರ್ಯಕರವಾದ ಸಂಗತಿ ಬರೆದಿಟ್ಟಿದ್ದಾರೆ. ದಲಿತರಿಗೆ ಮೀಸಲಿಟ್ಟಿದ್ದ ಹಣ ಅನಧಿಕೃತವಾಗಿ ಬಳಕೆಯಾಗಿದೆ. 87 ಕೋಟಿ ರೂಪಾಯಿ ಅನಧಿಕೃತವಾಗಿ ಟ್ರಾನ್ಸ್ ಫರ್ ಆಗಿದೆ. ಇದರಲ್ಲಿ ಯಾರ್ಯಾರ ಕೈವಾಡ ಇದೆ ಎಂದು ಕೂಡ ಬರೆದಿದ್ದಾರೆ. ರಾಜ್ಯದಲ್ಲಿ ದಲಿತರಿಗೆ, ಬಡವರಿಗೆ ಮೀಸಲಿಟ್ಟ ಹಣ ಹೊಡೆದು ತಿನ್ನುವ ಕೆಲಸ ನಡೆಯುತ್ತಿದೆ. ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣ ತನಿಖೆ ನಡೆಸಬೇಕು. ತಪ್ಪಿತಸ್ಥರ‌ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದರು.

Leave a Comment