ಬೆಂಗಳೂರು: ಬಿಜೆಪಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮಾಜಿ ಸಚಿವ ಹಾಗೂ ಗಣಿಉದ್ಯಮಿ ಜಿ.ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ. ನೂತನ ರಾಜಕೀಯ ಪಕ್ಷಕ್ಕೆ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೆಸರು ಇರಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಭಾರತ ಕಂಡ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಎಲ್ಲರಿಗೂ ಕ್ರಿಸ್ಮಸ್ ಹಬ್ದದ ಶುಭಾಶಯಗಳು. ಅಣ್ಣ ಬಸವಣ್ಣನವರ ವಚನ ಕಾಯಕವೇ ಕೈಲಾಸದ ತತ್ವ ನಂಬಿದವನು ನಾನು. ಶ್ರದ್ಧೆಯಿಂದ ಕೆಲಸ ಮಾಡಿಕೊಂಡು ಈವರೆಗೆ ಬಂದು ತಲುಪಿದ್ದೇನೆ. ಸತ್ಯದ ವಿಚಾರವನ್ನೇ ಹೇಳಿಕೊಂಡು ಬಂದಿದ್ದೇನೆ. ನನ್ನ 21ನೇ ವಯಸ್ಸಿನಲ್ಲಿ ಇನೋಬ್ಲಿಟಿ ಸಂಸ್ಥೆ ಆರಂಭಿಸಿದ್ದೆ. ನನ್ನ ಮೈನಿಂಗ್ ಕಂಪನಿಯಲ್ಲಿ ದೇವರು ಕೇಳಿಕೊಂಡಿದ್ದಕ್ಕೂ ಹೆಚ್ಚು ಕೊಟ್ಟಿದ್ದಾನೆ ಎಂದು ಸ್ಮರಿಸಿದರು.
ಶ್ರೀರಾಮಲು ಹಾಗೂ ನನ್ನ ಸ್ನೇಹಕ್ಕೆ ಹಲವು ವರ್ಷಗಳ ಹಿನ್ನೆಲೆಯಿದೆ. ನಾವು ಚಿಕ್ಕ ವಯಸ್ಸಿನಿಂದಲೂ ಸ್ನೇಹಿತರು. ಶ್ರೀರಾಮಲು ಬಡವರ ಪರವಾಗಿ ಇರುವ ನಾಯಕ. ರಾಜೀವ್ಗಾಂಧಿ ಬಳ್ಳಾರಿಗೆ ಬಂದಾಗ ಶ್ರೀರಾಮುಲುಗೆ
ಹಾರ ಹಾಕಿ ಸನ್ಮಾನ ಮಾಡಿದ್ದರು. ಆಗ ಬಳ್ಳಾರಿಯಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದಾಗ ಶ್ರೀರಾಮುಲುಗೆ ಟೆನ್ಷನ್ ಆಗಿತ್ತು. ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದ್ದರು. ನಂತರ ಏನೆಲ್ಲಾ ಬೆಳವಣಿಗೆಗಳು ಆಯಿತು ಎನ್ನುವುದು ಈಗ ಇತಿಹಾಸ’ ಎಂದು ವಿವರಿಸಿದರು.
ಮೊದಲ ಬಾರಿ ಪರಿಚಯವಾದಾಗ ಶ್ರೀರಾಮುಲುಗೆ 17 ವರ್ಷ ನನಗೆ 21 ವರ್ಷ. ಅವರ ಸೋದರಮಾವ ಸಾರ್ವಜನಿಕ ಜೀವನದಲ್ಲಿ ಇದ್ದರು. ರಾಜೀವ್ ಗಾಂಧಿಯವರು ಶ್ರೀರಾಮುಲು ಸೋದರಮಾವನನ್ನು ಗುರುತಿಸಿದ್ದರು. ಶ್ರೀರಾಮುಲು ಮೇಲೆಯೂ ಶತ್ರುಗಳ ಕಣ್ಣು ಇತ್ತು. ನಂತರ ಶ್ರೀರಾಮಲು ನನ್ನ ಆಶ್ರಯಕ್ಕೆ ಬಂದರು. ನಗರಸಭೆ ಸದಸ್ಯರಾಗಿ ಆಯ್ಕೆಯಾದರು. ಬಿಜೆಪಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋದರಮಾವನ ಕನಸು ನನಸು ಮಾಡಿದರು ಎಂದರು.














