ರಾಮನಗರ: ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಅವರ ಮೇಲೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಬಿಡದಿ ಬಳಿ ನಡೆದಿದೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕಾರು ಚಾಲಕ ಬಸವರಾಜು ನೀಡಿರುವ ದೂರಿನ ಮೇರೆಗೆ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಾಲಕ ನೀಡಿದ ದೂರಿನಲ್ಲಿ ಏನಿದೆ?: ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥನ್ ಹಾಗೂ ಅವರ ಅನುಯಾಯಿಗಳ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ಕಳೆದ ನಾಲ್ಕೈದು ವರ್ಷಗಳಿಂದ ರಿಕ್ಕಿ ರೈ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ತಮಗೆ ಜೀವ ಬೆದರಿಕೆ ಇರುವುದಾಗಿ ಹಲವು ಸಲ ರಿಕ್ಕಿ ಅವರು ಹೇಳಿದ್ದರು. ಅಲ್ಲದೆ, ಜಾಗರೂಕತೆಯಿಂದ ಇರುತ್ತಿದ್ದರು. ನಾವು ಮನೆಯ ಗೇಟ್ ದಾಟಿ ಹೊರಬರುತ್ತಿದ್ದಂತೆ ಕಾರಿನಲ್ಲಿ ನಾನು ಕುಳಿತಿರುವ ಕಡೆಯಿಂದಲೇ ಏಕಾಏಕಿ ಗುಂಡು ಹಾರಿಸಲಾಗಿದ್ದು, ನಾನು ಪಾರಾದೆ. ಆದರೆ ರಿಕ್ಕಿ ರೈ ಅವರ ಮೂಗು ಹಾಗೂ ಬಲತೋಳಿಗೆ ತೀವ್ರ ಗಾಯಗಳಾಯಿತು. ಅವರನ್ನು ಕೂಡಲೇ ಬಿಡದಿಯ ಆಸ್ಪತ್ರೆಯೊಂದಕ್ಕೆ ಸೇರಿಸಿ, ಪ್ರಥಮ ಚಿಕಿತ್ಸೆ ಬಳಿಕ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಹಿಂದೆ ರಿಕ್ಕಿ ಅವರ ತಂದೆ ಮುತ್ತಪ್ಪ ರೈ ಅವರಿಗೂ ಹಲವು ವಿರೋಧಿಗಳಿದ್ದು, ಅವರ ಮೇಲೆಯೂ ಕೊಲೆ ಯತ್ನ ನಡೆಸಿ ವಿಫಲರಾಗಿದ್ದರು. ರಿಕ್ಕಿ ಮೇಲೆ ಗುಂಡಿನ ದಾಳಿ ಸಂಚಿನಲ್ಲಿ ರಾಕೇಶ್ ಮಲ್ಲಿ, ಅನುರಾಧ ಹಾಗೂ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥನ್ ಮೇಲೆ ಅನುಮಾನವಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು'' ಎಂದು ದೂರಿನಲ್ಲಿ ಚಾಲಕ ಬಸವರಾಜು ಮನವಿ ಮಾಡಿದ್ದಾರೆ.
ಘಟನೆ ವಿವರ: ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಅವರು, ತಮ್ಮ ಫಾರ್ಚೂನರ್ ಕಾರಲ್ಲಿ ಡ್ರೈವರ್ ಹಾಗೂ ಗನ್ ಮ್ಯಾನ್ ಜೊತೆಗೆ ಬಿಡದಿ ಮನೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಗುಂಡಿನ ದಾಳಿಯಾಗಿದೆ. ಮಧ್ಯರಾತ್ರಿ ಸುಮಾರಿಗೆ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ರಷ್ಯಾದಿಂದ ಬಂದಿದ್ದರು. ಬೆಂಗಳೂರಿನ ಮನೆಯಲ್ಲೇ ಹೆಚ್ಚಾಗಿ ವಾಸಿಸುವ ಇವರು ನಿನ್ನೆ ರಾಮನಗರದ ಬಿಡದಿಯ ತೋಟದ ಮನೆಗೆ ಬಂದಿದ್ದರು.
ರಿಕ್ಕಿ ರೈ, ಪ್ರತಿ ಬಾರಿ ತಾವೇ ಕಾರು ಚಲಾಯಿಸುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಡ್ರೈವರ್‌ಗೆ ಕಾರು ಚಲಾಯಿಸಲು ಹೇಳಿದ್ದ ರಿಕ್ಕಿ ರೈ ಹಿಂಬದಿ ಸೀಟ್‌ನಲ್ಲಿ ಗನ್ ಮ್ಯಾನ್ ಜತೆ ಕುಳಿತಿದ್ದರು. ಡ್ರೈವಿಂಗ್ ಸೀಟ್ ಟಾರ್ಗೆಟ್ ಮಾಡಿದ ದುಷ್ಕರ್ಮಿ, ಮನೆಯ ಕೂಗಳತೆ ದೂರದಲ್ಲೇ ರಿಕ್ಕಿ ರೈ ಮೇಲೆ ಒಂದು ಸುತ್ತಿನ ಗುಂಡಿನ ದಾಳಿ ಮಾಡಿದ್ದಾನೆ. ಘಟನೆಯ ಸ್ಥಳಕ್ಕೆ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ, ಡಿವೈಎಸ್‌ಪಿ ಶ್ರೀನಿವಾಸ್ ಹಾಗೂ ಬಿಡದಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸಂಬಂಧಿಕರು ಹೇಳಿದ್ದೇನು?: ಘಟನೆ ಬಗ್ಗೆ ರಿಕ್ಕಿ ರೈ ಅವರ ಸಂಬಂಧಿಕರು ಪ್ರಕಾಶ್ ರೈ ಎನ್ನುವವರು ಪ್ರತಿಕ್ರಿಯಿಸಿದ್ದು, "ನನಗೆ ಮಧ್ಯರಾತ್ರಿ 12ಕ್ಕೆ ಲಾಯರ್ ನಾರಾಯಣಸ್ವಾಮಿ ಫೋನ್ ಮಾಡಿ ಹೀಗಾಗಿದೆ ಎಂದು ಹೇಳಿದ್ರು. ತಕ್ಷಣ ಬಿಡದಿ ಹತ್ರ ಬಂದೆ. ಆಗ ಸೆಕ್ಯೂರಿಟಿ, ಏನೋ ಸದ್ದು ಬಂತು, ರಿಕ್ಕಿ ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದರು. ಬಿಡದಿ ಸರ್ಕಾರಿ ಆಸ್ಪತ್ರೆಗೆ ಹೋದೆ ಅಲ್ಲಿರಲಿಲ್ಲ. ಅಲ್ಲಿಂದ ಭರತ್ ಕೆಂಪಣ್ಣ ಆಸ್ಪತ್ರೆಗೆ ಹೋದೆ, ಅಲ್ಲಿದ್ದರು. ನೋಡಿದಾಗ ರಿಕ್ಕಿ ಅವರ ಮೂಗು ಹಾಗೂ ಬಲಕೈ ತೋಳಿನ ಭಾಗಕ್ಕೆ ಗುಂಡು ತಾಗಿ, ಗಾಯವಾಗಿತ್ತು. ಡ್ರೈವರ್ನ ಬೆನ್ನಿಗೆ ಗಾಯವಾಗಿತ್ತು. ಹಿಂಬದಿಯಲ್ಲಿದ್ದ ಕಾರಣ ರಿಕ್ಕಿ ಅವರು ಕೂದಳೆಲೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ" ಎಂದು ತಿಳಿಸಿದರು.
"ಕಾರನ್ನು ಗಮನಿಸಿದೆ, ಗುಂಡು ಡ್ರೈವರ್ ಜಾಗದ ಬಾಗಿಲನ್ನು ಸೀಳಿ, ಹಿಂದುಗಡೆ ಕುಳಿತಿದ್ದ ರಿಕ್ಕಿ ಅವರ ಬಲಗೈಗೆ ತಾಗಿತ್ತು. ಜೊತೆಗೆ ಆ ವೇಳೆ ಬಾಗಿ ಬ್ಯಾಗ್ನಿಂದ ಏನೋ ತೆಗೆಯುತ್ತಿದ್ದ ಕಾರಣ ಅವರ ಮೂಗಿಗೂ ಗಂಭೀರವಾಗಿ
ಗಾಯವಾಗಿದೆ. ಅವರು ಸ್ವಲ್ಪ ಜಾಸ್ತಿ ಬಗ್ಗಿದ್ದರೂ, ಅವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಅದೃಷ್ಟ ಚೆನ್ನಾಗಿತ್ತು, ದೇವರ ದಯೆಯಿಂದ ಏನೂ ತೊಂದರೆ ಆಗಿಲ್ಲ. ಸ್ವಲ್ಪ ಮುಂದೆ ಫೈರ್ ಆಗುತ್ತಿದ್ದರೂ ಡ್ರೈವರ್ ಸಾಯುವ ಸಾಧ್ಯತೆ ಇತ್ತು" ಎಂದು ವಿವರಿಸಿದರು.
ರಿಕ್ಕಿ ಅವರಿಗೆ ಡ್ರೈವಿಂಗ್ ತುಂಬಾ ಇಷ್ಟ. ಹಾಗಾಗಿ ಸಾಮಾನ್ಯವಾಗಿ ಡ್ರೈವರ್ ಇದ್ರೂ ಯಾವಾಗಲು ಅವರೇ ಕಾರು ಚಲಾಯಿಸುತ್ತಾರೆ. ಅದನ್ನು ಟಾರ್ಗೆಟ್ ಮಾಡಿ ಡ್ರೈವರ್ ಸೀಟ್ಗೆ ಫೈರ್ ಮಾಡಿರಬಹುದು ಎಂದು ನಮಗನಿಸುತ್ತದೆ. ಈ ಬಗ್ಗೆ ನಮ್ಮ ಪೊಲೀಸ್ ಇಲಾಖೆ ಖಂಡಿತವಾಗಿಯೂ ಉತ್ತಮವಾಗಿ ತನಿಖೆ ನಡೆಸುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಸ್ತಿ ವಿವಾದ ಸಂಬಂಧ ದಾಳಿ ಮಾಡಿರಲೂಬಹುದು: "ಮುತ್ತಪ್ಪ ರೈ ಅವರ ಕಾಲದಿಂದ ಇರುವ ದ್ವೇಷ ಇನ್ನೂ ಮುಂದುವರಿದಿರುವ ಸಾಧ್ಯತೆ ಇದೆ. ಯಾಕಂದ್ರೆ ಇಲ್ಲಿ ಏನಾದರೂ ಸದ್ದು ಮಾಡಬೇಕಂದ್ರೆ ಅದಕ್ಕೆ ಒಂದು ಹೆಸರಿರಬೇಕು. ಹೆಸರಿರುವಂತಹ ವ್ಯಕ್ತಿಯ ಜೊತೆಗಿರುವವರು, ಅಥವಾ ಮಕ್ಕಳನ್ನು ಟಾರ್ಗೆಟ್ ಮಾಡಿ, ಅದರಿಂದ ಹೆಸರು ಪಡೆಯುವ ಉದ್ದೇಶವೂ ನಡೆದಿರಬಹುದು. ನಮ್ಮ ಲಾಯರ್ ಅವರು ಹೇಳಿದಂತೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿರಲೂಬಹುದು. ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆಸ್ತಿ ವಿವಾದದ ಕುರಿತು ಇತ್ತೀಚೆಗಷ್ಟೇ ರಾಜಿಯಾಗಿತ್ತು. ಒಂದು ಹಂತಕ್ಕೆ ಇತ್ಯರ್ಥ ಆಗಿತ್ತು. ಅದು ಸಂಪೂರ್ಣವಾಗಿ ಇತ್ಯರ್ಥ ಆಗಿದೆಯೋ? ಇಲ್ವಾ ಎನ್ನುವುದು ನಮಗೆ ಗೊತ್ತಿಲ್ಲ. ಇದಲ್ಲದೆ ಬೇರೆ ಏನಾದರೂ ಕಾರಣವಿರಬಹುದಾ ಎನ್ನುವುದು ಪೊಲೀಸ್ ಇಲಾಖೆಯ ತನಿಖೆಯಿಂದ ತಿಳಿದುಬರಬೇಕಿದೆ" ಎಂದು ಹೇಳಿದರು.
"ರಿಕ್ಕಿ ಅವರಿಗೆ ಹೆಂಡತಿ, ಮಗು ಇದ್ದಾರೆ. ಕುಟುಂಬದ ಜೊತೆ ಬಂದರೆ ಮನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಾರೆ. ಎಲ್ಲೂ ಹೊರಗಡೆ ಬರುವುದಿಲ್ಲ. ತೋಟದ ಮನೆಯಲ್ಲಿ ಇಂಟೀರಿಯರ್ ಕೆಲಸ ಆಗುತ್ತಿದೆ. ಅದನ್ನು ನೋಡಲು ಬಂದು ಹೋಗುತ್ತಿದ್ದಾರೆ. ಕುಟುಂಬದ ಜೊತೆ ಬಂದರೆ ಎರಡು ಮೂರು ತಿಂಗಳು, ಇಲ್ಲೇ ಮನೆಯಲ್ಲೇ ಉಳಿಯುತ್ತಾರೆ. ಇದನ್ನು ಯಾರೋ ಸೂಕ್ಷ್ಮವಾಗಿ ಗಮನಿಸಿ, ಈ ಪ್ಲಾನ್ ಮಾಡಿರಬಹುದು ಎಂಬುದು ಮೇಲ್ನೋಟಕ್ಕೆ ಅನಿಸುತ್ತದೆ. ಇದನ್ನು ಇಲಾಖೆಯವರು ಕೂಲಂಕಷವಾಗಿ ತನಿಖೆ ನಡೆಸಬೇಕು" ಎಂದು ಒತ್ತಾಯಿಸಿದರು.
ಎಸ್ಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯೆ: ''ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ತನಿಖೆ ಕೂಡ ನಡೆಸಿದ್ದೇವೆ'' ಎಂದು ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮನಗರದ ಎಸ್ಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ ಮಾಹಿತಿ ನೀಡಿದ ಅವರು, ''ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಅವರ ಹೇಳಿಕೆಯನ್ನು ಪಡೆಯಲಾಗಿದ್ದು, ಪ್ರಕರಣದ ತನಿಖೆಯನ್ನು ಆದಷ್ಟು ಬೇಗ ಮುಗಿಸುವ ವಿಶ್ವಾಸವಿದೆ. ಸದ್ಯದ ಮಾಹಿತಿ ಪ್ರಕಾರ ದಾಳಿ ಮಾಡಿದವರು ಒಂದು ಗನ್ ಬಳಕೆ ಮಾಡಿರುವುದು ಗೊತ್ತಾಗಿದೆ. ಈ ಆಧಾರದ ಹಿನ್ನೆಲೆಯಲ್ಲಿ ನಮ್ಮ ತನಿಖೆಯನ್ನು ಮುಂದುವರೆಸುತ್ತೇವೆ. ಇದರ ಜೊತೆಗೆ ದಾಳಿಗೊಳಗಾದವರು ಅನುಮಾನ ವ್ಯಕ್ತಪಡಿಸಿ ಹೆಸರಿಸಿದ ವ್ಯಕ್ತಿಗಳನ್ನು ಕರೆದು ವಿಚಾರಣೆ ಮಾಡುವ ಮೂಲಕ ಇನ್ನಷ್ಟು ಮಾಹಿತಿ ಕಲೆ ಹಾಕುವ ಪ್ರಯತ್ನ ಕೂಡ ಮಾಡುತ್ತೇವೆ'' ಎಂದರು.
''ನಿನ್ನೆ ತಡರಾತ್ರಿ 12ರಿಂದ 1 ಗಂಟೆ ಸುಮಾರು ಬಿಡದಿಯಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಮನೆಯ ಕಾಂಪೌಂಡ್ ಆಚೆ ಈ ಘಟನೆ ನಡೆದಿದೆ. ದಾಳಿಗೊಳಗಾದವರು ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಡಿಶ್ಚಾರ್ಜ್ ಬಳಿಕ ಅವರಿಂದ ಇನ್ನಷ್ಟು ಮಾಹಿತಿ ಪಡೆಯಲಾಗುವುದು'' ಎಂದರು.
''ದಾಳಿಗೊಳಗಾದವರು ಖಾಸಗಿ ದೂರು ವಿಚಾರವಾಗಿ ವಿದೇಶದಿಂದ ಆಗಮಿಸಿದ್ದರು ಎಂಬ ಮಾಹಿತಿ ಇದೆ. ಕೋರ್ಟ್ನಲ್ಲಿ ಈ ವಿಚಾರಣೆ ನಡೆಯುತ್ತಿದ್ದರಿಂದ ವಿದೇಶದಿಂದ ದೇಶಕ್ಕೆ ಬಂದಿರುವುದಾಗಿ ದಾಳಿಗೊಳಗಾದವರು ಹೇಳಿಕೊಂಡಿದ್ದಾರೆ. ದಾಳಿ ವೇಳೆ ಚಾಲಕ ಸೇರಿದಂತೆ ಮೂವರು ಇದ್ದರು. ಸಿವಿಲ್ ಡಿಸ್ಪೂಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಶಯ ವ್ಯಕ್ತಪಡಿಸಿ ದೂರು ನೀಡಿರುವುದಾಗಿ'' ಎಸ್ಪಿ ಶ್ರೀನಿವಾಸ್ ಗೌಡ ಹೇಳಿದರು.














