ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇದರ ಕುಂಬಾರಿಕಾ ತರಬೇತಿ ಕೇಂದ್ರದಲ್ಲಿ ಶಾಲಾ ಮಕ್ಕಳಿಗೆ ಎರಡು ದಿನಗಳ ಕ್ಲೇ ಮಾಡೆಲಿಂಗ್ ಮತ್ತು ವೀಲ್ ವರ್ಕ್ ತರಬೇತಿ ಕಾರ್ಯಕ್ರಮ ನಡೆಯಿತು.
ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ನಮ್ಮ ದೇಶದ ಕುಶಲ ಕಲೆಗಳ ಕಿರುಪರಿಚಯವನ್ನು ತಳಮಟ್ಟದಲ್ಲಿ ಪರಿಚಯ ಮಾಡುವ ಸಲುವಾಗಿ ಶಿಬಿರವನ್ನು ಆಯೋಜಿಸಲಾಗಿತ್ತು. 50 ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು.
ಪುತ್ತೂರು ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಿಗೆ ಇಂತಹ ಕುಶಲ ಕಲೆಗಳನ್ನು ಪರಿಚಯ ಮಾಡುವ ವಿಶೇಷ ಪ್ರಯತ್ನ ಅಭಿನಂದನಾರ್ಹ.
ಇದನ್ನು ಕಾಲೇಜು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಉತ್ತಮ ಎಂದು ತಿಳಿಸಿದರು.
ಕುಂಬಾರರ ಗುಡಿ ಕೈಗಾರಿಕೆ ಸಂಘದ ಅಧ್ಯಕ್ಷ ಭಾಸ್ಕರ್ ಎಂ. ಪೆರುವಾಯಿ ಮಾತನಾಡಿ, ಸಹಕಾರ ಸಂಘದಿಂದ ಸಮಾಜಮುಖಿ ಕಾರ್ಯವಾಗಿ ಈ ತರಬೇತಿಯನ್ನು ಪ್ರಾಯೋಗಿಕವಾಗಿ ಮಕ್ಕಳಿಗೆ ಆಯೋಜಿಸಿದ್ದೇವೆ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು.
ಸುಮಾರು 50 ವಿದ್ಯಾರ್ಥಿಗಳು ಬೇರೆ ಬೇರೆ ಭಾಗದಿಂದ ಭಾಗವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ಕುಲಾಲ್, ವಿಶ್ವನಾಥ ಕುಲಾಲ್, ವಿಜಯ ತರಬೇತಿ ನೀಡಿದರು.














