ನಟ ಉಪೇಂದ್ರ ವಿರುದ್ಧ ‘ಅಟ್ರಾಸಿಟಿ ಕೇಸ್’ ದಾಖಲು-ನಟನಿಗೆ ಬಂಧನದ ಭೀತಿ!

Coastal Bulletin
ನಟ ಉಪೇಂದ್ರ ವಿರುದ್ಧ ‘ಅಟ್ರಾಸಿಟಿ ಕೇಸ್’ ದಾಖಲು-ನಟನಿಗೆ ಬಂಧನದ ಭೀತಿ!

ಬೆಂಗಳೂರು: ಪರಿಶಿಷ್ಟರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ನಟ ಉಪೇಂದ್ರ ಅವರ ವಿರುದ್ಧ ಅಟ್ರಾಸಿಟಿ ಕೇಸು ದಾಖಲಾಗಿದ್ದು ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂಧನ್ ಅವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕಾಯ್ದೆಯಡಿ ಕೇಸ್  ದಾಖಲಿಸಲಾಗಿದೆ.ಉಪೇಂದ್ರ ನೀಡಿದ ಹೇಳಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಪ್ರತಿಭಟನೆ ಕೂಡ ನಡೆಸಲಾಗಿದೆ. ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ದೂರು ಕೂಡ ದಾಖಲಿಸಿವೆ. ಉಪೇಂದ್ರ ಅವರನ್ನು ಬಂಧಿಸಬೇಕೆಂಬ ಒತ್ತಾಯ ಕೂಡ ಕೇಳಿ ಬಂದಿದೆ.

ಉಪೇಂದ್ರ ತಾವು ನೀಡಿದ ಹೇಳಿಕೆಗಾಗಿ ಕ್ಷಮೆ ಕೇಳಿ ವಿಡಿಯೋ ಡಿಲಿಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಉಪೇಂದ್ರ ಪರ ಮತ್ತು ವಿರೋಧವಾಗಿ ಅಭಿಪ್ರಾಯಗಳು ಕೇಳಿ ಬಂದಿವೆ. ಸೆಲೆಬ್ರಿಟಿಯಾಗಿರುವ ನಟ ಉಪೇಂದ್ರ ರಾಜಕೀಯ ಪಕ್ಷದ

ಮುಖ್ಯಸ್ಥರೂ ಆಗಿದ್ದಾರೆ. ಅವರು ನೀಡಿದ ಹೇಳಿಕೆ ಆಕ್ಷೇಪಾರ್ಹವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆಲವರು ಒತ್ತಾಯಿಸಿದ್ದು, ಅವರು ಈಗಾಗಲೇ ವಿಡಿಯೋ ಡಿಲಿಟ್ ಮಾಡಿ ಕ್ಷಮೆ ಕೇಳಿರುವುದರಿಂದ ಇದನ್ನು ಇಲ್ಲಿಗೆ ನಿಲ್ಲಿಸುವುದು ಒಳಿತು ಎಂದು ಮತ್ತೆ ಕೆಲವರು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು, ಫೇಸ್ಬುಕ್ ನಲ್ಲಿ ಉಪೇಂದ್ರ ಅವರು ಹೇಳಿಕೆ ನೀಡಿದ್ದು, ಕೆಲ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪ ಮಾಡಲಾಗಿದೆ. ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಕಾನೂನಿನಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.ಇವೆಲ್ಲಾ ಬೆಳವಣಿಗೆಗಳ ನಡುವೆ ಅಟ್ರಾಸಿಟಿ ಕೇಸ್ ದಾಖಲಾಗಿರುವುದರಿಂದ ಉಪೇಂದ್ರ ಅವರನ್ನು ಬಂಧಿಸುತ್ತಾರಾ ಎಂದೆಲ್ಲಾ ಚರ್ಚೆಗಳು ನಡೆದಿವೆ.

Leave a Comment