ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಶಾಸಕ, ಮಾಜಿ ಸಚಿವರ ಮನೆ ಮೇಲೆ ಇ.ಡಿ ಅಧಿಕಾರಿಗಳಿಂದ ದಾಳಿ.

Coastal Bulletin
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಶಾಸಕ, ಮಾಜಿ ಸಚಿವರ ಮನೆ ಮೇಲೆ ಇ.ಡಿ ಅಧಿಕಾರಿಗಳಿಂದ ದಾಳಿ.

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ದದ್ದಲ್ ನಿವಾಸಕ್ಕೆ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಮಂಗಳವಾರವಷ್ಟೇ ಬಸನಗೌಡ ದದ್ದಲ್​ ಎಸ್​ಐಟಿ ವಿಚಾರಣೆ ಎದುರಿಸಿದ್ದರು.

ಬಳ್ಳಾರಿಯ ನೆಹರು ಕಾಲೋನಿಯಲ್ಲಿರುವ ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್​ ಶಾಸಕ ನಾಗೇಂದ್ರ ಮನೆ ಮೇಲೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಡಾಲರ್ಸ್​ ಕಾಲೋನಿಯಲ್ಲಿರುವ ನಾಗೇಂದ್ರ ಫ್ಲ್ಯಾಟ್​ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಧಿಕಾರಿಗಳಿಂದ ಫ್ಲ್ಯಾಟ್​ನಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಚುರುಕುಗೊಳಿಸಿದ್ದ ಎಸ್​ಐಟಿ ಅಧಿಕಾರಿಗಳು ಮಾಜಿ ಸಚಿವ ಬಿ ನಾಗೇಂದ್ರ, ಬಸನಗೌಡ ದದ್ದಲ್​​ಗೆ ಮಂಗಳವಾರ ಪ್ರಶ್ನೆಗಳ ಸುರಿಮಳೆಗೈದಿದ್ದರು. ಸತತ 8 ಗಂಟೆ ವಿಚಾರಣೆ ನಡೆಸಿದ್ದರು.

Leave a Comment