ಬೆಂಗಳೂರು: ನಮ್ಮ ಮೆಟ್ರೋ ರಾಜಧಾನಿ ಬೆಂಗಳೂರಿನ ಅತಿ ವೇಗದ ಸಂಪರ್ಕ ಸಾರಿಗೆಯಾಗಿದೆ. ಈ ನಮ್ಮ ಮೆಟ್ರೋ ರೈಲಿನಲ್ಲಿ ಅಸಭ್ಯ ವರ್ತಿಸಿದ ಯುವಕ-ಯುವತಿಯ ವಿರುದ್ಧ ಪ್ರಯಾಣಿಕರೋರ್ವರು ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರು ಮೆಟ್ರೋ ರೈಲು ಸಂಚಾರ ನಿಗಮ (BMRCL) ಗೆ ದೂರು ನೀಡಿದ್ದಾರೆ. ನಮ್ಮ ಮೆಟ್ರೋದ ಬಾಗಿಲು ಬಳಿ ಯುವಕ-ಯುವತಿ ನಿಂತು ತಬ್ಬಿಕೊಂಡಿದ್ದು, ಯುವತಿ ಯುವಕನಿಗೆ ಮುತ್ತು ನೀಡುತ್ತಿರುವ ದೃಶ್ಯವನ್ನು ಪ್ರಯಾಣಿಕ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು KPSB 52 ಎಂಬ ಎಕ್ಸ್ (ಟ್ವಿಟರ್) ಖಾತೆ ಮೂಲಕ ಪೋಸ್ಟ್ ಮಾಡಲಾಗಿದ್ದು “ನಮ್ಮ ಮೆಟ್ರೋದಲ್ಲಿ ಇದೇನು ಅಸಭ್ಯವರ್ತನೆ” ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ “ಬೆಂಗಳೂರು ಮೆಟ್ರೋ ನಿಧಾನವಾಗಿ ದೆಹಲಿ ಮೆಟ್ರೋ ರೀತಿ ಆಗುತ್ತಿದೆ. ಯುವತಿ ಯುವಕನಿಗೆ ಮುತ್ತು ನೀಡುತ್ತಿದ್ದಾಳೆ. ಮೆಟ್ರೋದಲ್ಲಿ ಅಸಭ್ಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಬಿಎಂಆರ್ಸಿಎಲ್ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ನಮ್ಮ ಮೆಟ್ರೋದಲ್ಲಿ ಮಕ್ಕಳು,
ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ. ಈ ರೀತಿಯ ನಡವಳಿಕೆಯು ಸರಿಯಲ್ಲ ಎಂದಿದ್ದಾರೆ.ಕೆಲವರು ಪ್ರೀತಿ-ಪ್ರೇಮ, ಪ್ರಣಯವೆಲ್ಲ ಮನೆಯಲ್ಲಿದ್ದರೆ ಚೆನ್ನ ಎಂದಿದ್ದಾರೆ. ಹಾಗೇ, ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ಮಾಡುವುದರಿಂದ ಉಳಿದವರಿಗೆ ಮುಜುಗರ ಆಗುತ್ತದೆ ಎಂದೂ ಹೇಳಿದ್ದಾರೆ. ಆದರೆ ಇನ್ನೂ ಕೆಲವರು. ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಪರಸ್ಪರ ಅಪ್ಪಿಕೊಂಡು ನಿಂತಿದ್ದರಷ್ಟೇ. ಬೇರೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.









