ವಿಜಯಪುರ : ಕಳೆದ ಬಾರಿ ನಡೆದ ಮಹಾನಗರ ಪಾಲಿಕೆಯ ಚುನಾವಣೆ ದ್ವೇಷದ ಹಿನ್ನೆಲೆ ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆ ನಿಶಾತ್ ಅವರ ಪತಿ ರೌಡಿಶೀಟರ್ ಹೈದರ್ ಅಲಿ ನದಾಫ್ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ವಿಜಯಪುರ ಎಸ್ಪಿ ಎಚ್‌ಡಿ ಆನಂದಕುಮಾರ ಮಾಹಿತಿ ನೀಡಿದ್ದಾರೆ. ವಿಜಯಪುರ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 4ಕ್ಕಿಂತ ಹೆಚ್ಚು ಬಾರಿ ಹೈದರ್ ಅಲಿ ನದಾಫ್‌ನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಅಲ್ಲದೇ, ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಲೈಸೆನ್ಸ್ ಗನ್ ಮೂಲಕ ಹತ್ಯೆ ಮಾಡಿಲ್ಲ. ಹತ್ಯೆಯಲ್ಲಿ ಕಂಟ್ರಿಮೇಡ್ ಪಿಸ್ತೂಲು ಉಪಯೋಗವಾಗಿರಬೇಕು ಎಂದಿದ್ದಾರೆ. ಈ ಹತ್ಯೆ ಮಹಾನಗರ ಪಾಲಿಕೆಯ ಚುನಾವಣೆ ದ್ವೇಷಕ್ಕಾಗಿ ಹತ್ಯೆ ಮಾಡಲಾಗಿದೆ. ಆದಷ್ಟು ಬೇಗನೆ ದುಷ್ಕರ್ಮಿಗಳನ್ನು ಬಂಧನ ಮಾಡಲಾಗುತ್ತದೆ ಎಂದಿದ್ದಾರೆ.
ಶನಿವಾರ ಬೆಳಗ್ಗೆ ಗುಮ್ಮಟನಗರಿಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿತ್ತು. ವಿಜಯಪುರ ನಗರದ ಚಾಂದಪುರ ಕಾಲೋನಿಯಲ್ಲಿ ಹಾಡುಹಗಲೇ ಗುಂಡು ಹಾರಿಸಿ ಅಪರಿಚಿತ ದುಷ್ಕರ್ಮಿಗಳು ರೌಡಿಶೀಟರ್ ಹೈದರ್ ಅಲಿ ನದಾಫ್ ಮೇಲೆ ಸಾರ್ವಜನಿಕವಾಗಿ ಗುಂಡು ಹಾರಿಸಿದ್ದು, ಸ್ಥಳದಲ್ಲಿಯೇ
ಹೈದರ್ ಅಲಿ ನದಾಫ್ ಸಾವನ್ನಪ್ಪಿದ್ದಾನೆ. ಫೈರಿಂಗ್ ಮಾಡಿದ ತಕ್ಷಣವೇ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಂತಕರು ಎರಡು ಕಾರು ಮತ್ತು ಬೈಕ್ ನಲ್ಲಿ ಪರಾರಿಯಾಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಹೈದರ್ ಪತ್ನಿ ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದಾಳೆ.















