ಬೆಂಗಳೂರು : ಸುದೀಪ್ ಬೊಮ್ಮಾಯಿ ಪರ ಪ್ರಚಾರ ನಡೆಸುತ್ತೇನೆ. ಅವರಿಗೆ ಬೆಂಬಲ ನೀಡುತ್ತೇನೆ. ರಾಜಕೀಯವಾಗಿ ಅಲ್ಲ ವೈಯುಕ್ತಿಕವಾಗಿ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರ ಬೀಳಲಿದೆ. ಹೀಗಿರುವಾಗ ಇತ್ತ ಪಕ್ಷಗಳೂ ಭರ್ಜರಿ ತಯಾರಿ ನಡೆಸುತ್ತಿದೆ. ಇಂದು ಬೆಳಗ್ಗಿನಿಂದ ನಟ ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ, ಸ್ಟಾರ್ ಪ್ರಚಾರಕರಾಗುತ್ತಾರೆ ಎಂಬ ಸುದ್ದಿಯೇ ಹರಿದಾಡುತ್ತಿತ್ತು. ಈ ನಿಟ್ಟಿನಲ್ಲಿ ಮಹತ್ವದ ಸುದ್ದಿಗೋಷ್ಠಿಯನ್ನೂ ಆಯೋಜಿಸಿದ್ದು, ಇದರಲ್ಲಿ ಸುದೀಪ್ ಬೊಮ್ಮಾಯಿ ಪರ ಪ್ರಚಾರ ನಡೆಸುತ್ತೇನೆ. ಅವರಿಗೆ ಬೆಂಬಲ ನೀಡುತ್ತೇನೆ. ರಾಜಕೀಯವಾಗಿ ಅಲ್ಲ ವೈಯುಕ್ತಿಕವಾಗಿ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಸುದೀಪ್ ಹಾಗೂ ಸಿಎಂ ಬೊಮ್ಮಾಯಿ ಏನು ಸಂಬಂಧ ಎಂಬ ವಿಷಯವೂ ಚರ್ಚೆಯಾಗುತ್ತಿದೆ.
ಕಳೆದೆರಡು ವರ್ಷಗಳ ಹಿಂದೆ ಲಿಂಗಾಯತ ನಾಯಕ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ 'ಅವರ ಸರಳತೆಯನ್ನು ನೋಡಿಕೊಂಡು ಬೆಳೆದವನು ನಾನು. ನನ್ನ ಕೆರಿಯರ್‌ನ ಆರಂಭಿಕ ದಿನಗಳಲ್ಲಿ ನನ್ನ ದೊಡ್ಡ ಸಪೋರ್ಟ್ ಆಗಿದ್ದವರು. ವಿಶಿಂಗ್ ಯು ದಿ ಬೆಸ್ಟ್ ಮಾಮ' ಎಂದಿದ್ದರು.
ಈ ಹಿಂದೆ ಒಂದು ಖಾಸಗಿ ವಾಹಿನಿಯ ಸಂದರ್ಶನದ ವೇಳೆ ಸುದೀಪ್ ಅವರು ಸಿಎಂ ಬೊಮ್ಮಾಯಿ ನನ್ನ ತಂದೆಯ ಸ್ನೇಹಿತರು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಈ ಬಗ್ಗೆ ಮತ್ತಷ್ಟು ವಿವರಿಸಿದ್ದ ಸಿಎಂ ಬೊಮ್ಮಾಯಿ,
ಸುದೀಪ್ ಅವರ ತಂದೆ ಸಂಜೀವಣ್ಣ ನನ್ನ ಆತ್ಮೀಯ ಸ್ನೇಹಿತರು. ಅನೇಕ ವರ್ಷಗಳ ಸ್ನೇಹ ನಮ್ಮದು. ಸುದೀಪ್ ನಟನಾಗುತ್ತಾನೆಂದು ನಾನು ಅಂದುಕೊಂಡಿರಲಿಲ್ಲ. ಆತನಿಗೆ ಕ್ರಿಕೆಟ್ ಅಂದರೆ ಬಹಳ ಇಷ್ಟವಿತ್ತು. ಅದೇ ಕ್ಷೇತ್ರದಲ್ಲಿ ಮುಂದುವರೆಯುತ್ತಾನೆಂದು ಅಂದುಕೊಂಡಿದ್ದೆ ಎಂದು ಹಳೇ ದಿನಗಳನ್ನು ಮೆಲುಕು ಹಾಕಿದ್ದರು. ಸುದೀಪ್ ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರು.
ಇದೀಗ ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಮತ್ತೆ ಸುದೀಪ್ ಅವರು ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿರುವುದು ಭಾರೀ ಸಂಚಲನ ಸೃಷ್ಟಿಸಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ನಾನು ಚಿಕ್ಕಂದಿನಿಂದ ಅವರನ್ನು ನೋಡುತ್ತಿದ್ದೇನೆ. ಅವರೆಷ್ಟು ಸರಳ ವ್ಯಕ್ತಿ ಎಂದು ನನಗೆ ಗೊತ್ತು. ಕಷ್ಟದ ದಿನಗಳಲ್ಲಿ ನನ್ನ ಜೊತೆಗಿದ್ದವರಲ್ಲಿ ಬೊಮ್ಮಾಯಿ ಮಾಮ ಕೂಡಾ ಒಬ್ಬರು. ಹೀಗಾಗಿ ಅವರಿಗೆ ನಾನು ಬೆಂಬಲ ಕೊಡುತ್ತೇನೆ. ನನ್ನ ಅವಶ್ಯಕತೆ ಎಲ್ಲೆಲ್ಲಿ ಬೀಳುತ್ತೋ ಅಲ್ಲಿಲ್ಲಿ ನಾನು ಸಹಾಯ ಮಾಡುತ್ತೇನೆ. ನನ್ನ ಬೆಂಬಲ ಬೊಮ್ಮಾಯಿಗಷ್ಟೇ ಹೊರತು ಪಕ್ಷಕ್ಕಲ್ಲ. ಆದರೆ ಬೊಮ್ಮಾಯಿಯವರು ಹೇಳಿದ ಕೆಲಸಗಳನ್ನು ಮಾಡಲು ನಾನು ಸಿದ್ಧ. ಅವರು ಯಾರ ಪರವಾದರೂ ಪ್ರಚಾರ ಮಾಡಿ ಎಂದು ಹೇಳಿದರೆ ನಾನು ಮಾಡುತ್ತೇನೆ. ಇದು ವೈಯುಕ್ತಿಕ ನಿಲುವು, ನನಗೆ ಸಹಾಯ ಮಾಡಿದವರಿಗೆ ಈಗ ನಾನು ಸಹಾಯ ಮಾಡುತ್ತೇನೆ ಎಂದಿದ್ದಾರೆ.














