ಬೆಂಗಳೂರು: ದ್ವೇಷ ಭಾಷಣ ಕುರಿತ ಮಸೂದೆ ನೆನೆಗುದಿಗೆ ಬೀಳಬೇಕು, ಜಾರಿಯಾಗಬಾರದು ಎಂಬ ಉದ್ದೇಶದಿಂದಲೇ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೂರಿದರು.
ನಗರದಲ್ಲಿಂದು ಮಾತನಾಡಿದ ಅವರು, ದ್ವೇಷ ಭಾಷಣ ಮಸೂದೆಯಲ್ಲಿರುವ 28 ಅಂಶಗಳನ್ನು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಅದನ್ನು ರಾಷ್ಟ್ರಪತಿಗಳಿಗೂ ಕಳುಹಿಸಿದ್ದಾರೆ. ಮುಂದೆ ಏನಾಗುತ್ತದೆ, ನೋಡೋಣ. ಮಸೂದೆಯನ್ನು ರಾಷ್ಟ್ರಪತಿಗಳು ಪರಿಶೀಲಿಸಿ ವಾಪಸ್ ಕೊಟ್ಟರೆ ಬದಲಾವಣೆ ಮಾಡಿ ಕಳುಹಿಸಲಾಗುವುದು ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಏನು ಬೇಕಾದರೂ ಮಾತನಾಡಿದರೆ ಅದರ ಪರಿಣಾಮ ಸಮಾಜದ ಮೇಲಾಗುತ್ತದೆ. ಸಮುದಾಯಗಳನ್ನು ದೂಷಣೆ ಮಾಡುವುದು, ವೈಯಕ್ತಿಕವಾಗಿ ಮಾತನಾಡುವುದು, ಆ ಮಾತುಗಳು ಸಮಾಜದ ಮೇಲೆ ಏನು ಪರಿಣಾಮ ಬೀರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ದ್ವೇಷ ಭಾಷಣ ಮಸೂದೆ ತಂದಿದ್ದೇವೆ. ಕೆಲವು ಭಾಗಗಳಲ್ಲಿ, ಕೆಲವರು ಭಾಷಣಗಳನ್ನು ಮಾಡಿದ್ದಾರೆ. ಭಾಷಣ ಮಾಡಿದ ಮೇಲೆ ಏನಾಯಿತು ಎಂಬುದನ್ನು ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ಬಿಲ್ ತಂದಿದ್ದೇವೆ ಎಂದು ಹೇಳಿದರು.
ದುರ್ಬಲ ಬಜೆಟ್-ಪರಮೇಶ್ವರ್: ದೇಶದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಜನ ಸಮುದಾಯ ಅನೇಕ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ ಎಲ್ಲವೂ ಹುಸಿಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 9 ಬಜೆಟ್‌ಗಳಲ್ಲಿ, ಇದು ಅತ್ಯಂತ ದುರ್ಬಲ ಬಜೆಟ್ ಎಂದು ಗೃಹ ಸಚಿವರು ಟೀಕಿಸಿದರು.
ಈ ಹಿಂದಿನ ಬಜೆಟ್‌ಗಳಲ್ಲಿ
ಕೃಷಿ, ಕೈಗಾರಿಕಾ ವಲಯಗಳಿಗೆ ಪ್ರಾತಿನಿಧ್ಯ ಕೊಡುತ್ತಿದ್ದರು. ಬಡತನ ನಿರ್ಮೂಲನೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳಿದ್ದವು. ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೀಡಿದ್ದರು. ಇಡೀ ಪ್ರಪಂಚದಲ್ಲೇ ಅಂತಹ ಕಾರ್ಯಕ್ರಮವಿಲ್ಲ. ಅದೆಲ್ಲವನ್ನೂ ಗಾಳಿಗೆ ತೂರಿ, ಇಡೀ ದೇಶಕ್ಕೆ ನಿರಾಸೆ ಮೂಡಿಸಿದ್ದಾರೆ ಎಂದರು.
53.50 ಲಕ್ಷ ಕೋಟಿ ರೂ.ಗಳಲ್ಲಿ 16 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಇಷ್ಟೊಂದು ಸಾಲ ಮಾಡಿಕೊಂಡು, ವಿಧಾನಸಭೆಯಲ್ಲಿ ನಮಗೆ ನೀತಿಪಾಠ ಹೇಳುತ್ತಾರೆ. ಅಷ್ಟೊಂದು ಸಾಲ ಮಾಡಿಕೊಂಡು ಜನ ಸಮುದಾಯಕ್ಕೆ ಏನು ಕೊಟ್ಟಿದ್ದಾರೆ? ಕರ್ನಾಟಕಕ್ಕೆ ಏನೂ ನೀಡಿಲ್ಲ. ಹೇಳಿಕೊಳ್ಳುವಂತಹ ಒಂದೇ ಒಂದು ಯೋಜನೆ ನೀಡಿಲ್ಲ. ನೀರಾವರಿ, ಕೃಷಿ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಬೇಕಿತ್ತು. ಯಾವುದೇ ಯೋಜನೆಯನ್ನು ನೀಡದೇ ಇರುವುದನ್ನು ಬಜೆಟ್ ಅಂತ ಕರೆಯಬೇಕೇ? ಎಂದರು.
ವಿಶ್ವದಲ್ಲಿ ಶಿಕ್ಷಣ ವಲಯ ಸಾಕಷ್ಟು ವೇಗವಾಗಿ ಬದಲಾವಣೆ ಕಾಣುತ್ತಿದೆ. ದೇಶದಲ್ಲಿ ಶಿಕ್ಷಣವನ್ನೇ ಹಿಂದೆ ತಳ್ಳಿದ್ದಾರೆ. ರಾಜ್ಯಕ್ಕೆ ಐಐಟಿ, ಏಮ್ಸ್‌ಗಳನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ, ಪ್ಲಾಸ್ಟಿಕ್, ಬೆಂಕಿ ಪಟ್ಟಣದ ಬೆಲೆ ಕಡಿಮೆ ಮಾಡಿದ್ದಾರೆ. ಇದೊಂದು ನಿರಾಶಾದಾಯಕ ಬಜೆಟ್ ಎಂದು ಹೇಳಿದರು.














