ರಾಮಜನ್ಮ ಭೂಮಿ ಹೋರಾಟದಲ್ಲಿ ದಾಖಲಿಸಿದ ಪ್ರಕರಣದ ಆರೋಪಿಗಳನ್ನು 31 ವರ್ಷಗಳ ಬಳಿಕ ಬಂಧಿಸುತ್ತಿರುವ ಕಾಂಗ್ರೆಸ್ ಸರಕಾರ- ಹಿಂದೂ ವಿರೂಧಿ ನೀತಿಗೆ ವ್ಯಾಪಕ ಖಂಡನೆ.

Coastal Bulletin
ರಾಮಜನ್ಮ ಭೂಮಿ ಹೋರಾಟದಲ್ಲಿ ದಾಖಲಿಸಿದ ಪ್ರಕರಣದ ಆರೋಪಿಗಳನ್ನು 31 ವರ್ಷಗಳ ಬಳಿಕ ಬಂಧಿಸುತ್ತಿರುವ ಕಾಂಗ್ರೆಸ್ ಸರಕಾರ- ಹಿಂದೂ ವಿರೂಧಿ ನೀತಿಗೆ ವ್ಯಾಪಕ ಖಂಡನೆ.

ಹುಬ್ಬಳ್ಳಿ : 31 ವರ್ಷದ ಬಳಿಕ ರಾಮ ಜನ್ಮಭೂಮಿ‌ ಹೋರಾಟದ ಪ್ರಕರಣಕ್ಕೆ‌ ಮರುಜೀವ ಬಂದಿದ್ದು, ರಾಮ ಜನ್ಮಭೂಮಿ ಹೋರಾಟಗಾರರಿಗೆ ಬಂಧನದ ಭೀತಿ ಶುರುವಾಗಿದೆ. ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಹುಬ್ಬಳ್ಳಿ ಪೊಲೀಸರು ಅಂದಿನ ಆರೋಪಿಗಳಿಗಾಗಿ ಏಕಾಏಕಿ ಹುಡುಕಾಟ ಆರಂಭಿಸಿದ್ದಾರೆ. ರಾಮಮಂದಿರ ಉದ್ಘಾಟನೆ ವಿಚಾರ ಕರ್ನಾಟಕದಲ್ಲಿ ರಾಜಕೀಯವಾಗಿ ಮುನ್ನೆಲೆಗೆ ಬಂದಿದೆ. ರಾಮ ಮಂದಿರ ಲೋಕಾರ್ಪಣೆಗೆ ಸಿದ್ದವಾಗಿರುವ ಈ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 30 ವರ್ಷದ ಹಳೆಯ ಪ್ರಕರಣವನ್ನು ಕೆದಕಿ ಹಿಂದೂ ಕರಸೇವಕರ ಬಂಧನ ಮಾಡಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗುತ್ತಿರುವುದು ಕಾಂಗ್ರೆಸ್ ನವರಿಗೆ ಸಹಿಸಲು ಆಗುತ್ತಿಲ್ಲ. ಇಡೀ ದೇಶದ ಜನ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದರ ಹಿಂದಿನ ಉದ್ದೇಶ ಏನು? ಎಂದು ಅವರು ಮಂಗಳವಾರ ಸರಣಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.ಇಡೀ ದೇಶವೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ಕೊಡುತ್ತಿರುವ ಸಂದರ್ಭದಲ್ಲಿ ಈ ರೀತಿ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಪಾಲನೆ ಮಾಡುವವರೇ ಕಾನೂನು ಉಲ್ಲಂಘನೆ ಮಾಡುತ್ತಿರುವುದಕ್ಕೆ ಇದು ಸ್ಪಷ್ಪ ನಿದರ್ಶನ.

ಈಗಾಗಲೇ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿರುವುದಕ್ಕೆ ಕಾಂಗ್ರೆಸ್ ಗೆ ಸಂಸತ್ತಿನಲ್ಲಿ ಪ್ರತಿಪಕ್ಷದ ಸ್ಥಾನವೂ ಇಲ್ಲದಂತಾಗಿದೆ. ಈ ರೀತಿಯ ದ್ವೇಷದ

ರಾಜಕಾರಣದಿಂದ ರಾಜ್ಯದಲ್ಲಿಯೂ ಕಾಂಗ್ರೆಸ್ ಅಂತ್ಯ ಕಾಣುವುದೂ ನಿಶ್ಚಿತ ಎಂದು ಅವರು ಎಚ್ಚರಿಸಿದರು.

ರಾಮಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಪ್ರಕರಣ ದಾಖಲಾದಾಗ ಆರೋಪಿತ ವ್ಯಕ್ತಿಗಳು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ, ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave a Comment