ಬೆಂಗಳೂರು: ಜಮೀನಿನ ಸರ್ವೇ ಮಾಡಲು ಈ ಹಿಂದೆ ಚೈನ್ ಹಿಡಿದು ಅಳತೆ ಮಾಡಬೇಕಿತ್ತು. ಇದಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಭೂ ಮಾಪನ ಇಲಾಖೆಯ ಮೂಲಕ ನಡೆಸುವ ಭೂ ಸರ್ವೇಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಜಮೀನು ಸರ್ವೇ ವೇಗ ಹೆಚ್ಚಳ ಮಾಡಲು ಮತ್ತು ನಿಖರ ವರದಿಗಾಗಿ ತಂತ್ರಜ್ಞಾನ ಆಧಾರಿತ 'ರೋವರ್ ಉಪಕರಣ' ಮೂಲಕ ಜಮೀನಿನ ಸರ್ವೇ ಮಾಡುವ ವಿಧಾನವನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಇನ್ನು ಮುಂದೆ ಜಮೀನು 11ಇ, ಪೋಡಿ ಸೇರಿದಂತೆ ಸರ್ವೇ ನಕ್ಷೆಗೆ ವಾರಗಟ್ಟಲೇ ಕಾಯಬೇಕಾಗಿಲ್ಲ. ಮೋಜಣಿಯಲ್ಲಿ ಸಲ್ಲಿಸುವ ಅರ್ಜಿಗಳ ವಿಲೇವಾರಿಗೆ ವೇಗ ಸಿಗುವುದರ ಜೊತೆಗೆ ನಿಖರ ವರದಿ ಮತ್ತು ಡಿಜಿಟಲ್ ನಕ್ಷೆ ಸಿಗಲಿದೆ.
ಸರ್ವೇ ವಿಧಾನ ಹೇಗೆ?: ತಂತ್ರಜ್ಞಾನ ಆಧಾರಿತ ರೋವರ್ ಉಪಕರಣವನ್ನು ಬಳಕೆ ಮಾಡಿ ಜಮೀನಿನ ಸರ್ವೇ ಮಾಡುವ ವಿಧಾನ ಹೇಗೆ?, ಇದು ಹೇಗೆ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ಸರ್ವೇ ವಿಧಾನ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ. ರೈತರು ತಮ್ಮ ಜಮೀನಿನ ಸರ್ವೇ ಮಾಡಿಸಬೇಕೆಂದರೆ ಕನಿಷ್ಠ ಮೂರರಿಂದ ನಾಲ್ಕು ಗಂಟೆಗಳು, ಒಮ್ಮೊಮ್ಮೆ ಇಡೀ ದಿನ ಬಿಸಿಲಿನಲ್ಲಿ ನಿಂತು ಚೈನ್ ಹಿಡಿದು ಹರಸಾಹಸ ಪಡಬೇಕಿತ್ತು. ಆದರೆ, ಇನ್ನು ಮುಂದೆ ಇದು ಅತ್ಯಂತ ಸುಲಭವಾಗಲಿದೆ.
ಸರ್ವೇ ಕೆಲಸವನ್ನು ಹಿಂದಿನಿಂದಲೂ ಚೈನ್ ಹಿಡಿದೇ ಭೂಮಿ ಅಳೆಯುವ ಸಂಪ್ರದಾಯ ಚಾಲನೆಯಲ್ಲಿದೆ. ಈ ವೇಳೆ ಕೆಲವರ ಹಸ್ತಕ್ಷೇಪದಿಂದ ಭ್ರಷ್ಟಾಚಾರಕ್ಕೂ ಅವಕಾಶವಿತ್ತು. ಒಂದು ನಕ್ಷೆ ತಯಾರಿಸಲು ಮೂವರು 50 ರಿಂದ 70 ನಿಮಿಷ ಭೂಮಿ ಸರ್ವೇ ನಡೆಸಬೇಕಿತ್ತು. ಆ ನಂತರ ಕಚೇರಿಯಲ್ಲಿ ಕುಳಿತು ನಕ್ಷೆ ಬಿಡಿಸಲು ಸುಮಾರು 3 ಗಂಟೆ
ತೆಗೆದುಕೊಳ್ಳುತ್ತಿತ್ತು. ಇದೀಗ ಈ ಹೊಸ ರೋವರ್ ಉಪಕರಣ ತಂತ್ರಜ್ಞಾನದ ಮೂಲಕ ಕೇವಲ 10 ನಿಮಿಷದಲ್ಲಿ ಸರ್ವೇ ಮಾಡಬಹುದು. ಸ್ಯಾಟಲೈಟ್‌ನಿಂದ ಮಾಹಿತಿ ಪಡೆದು ಸ್ವಯಂಚಾಲಿತವಾಗಿ ನಕ್ಷೆ ಸಹ ಸಿದ್ಧವಾಗಿ, ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದೆ. ಕಡಿಮೆ ಅವಧಿಯಲ್ಲಿ ಸರ್ವೇ ಕೆಲಸ ಮುಗಿಯಲಿದ್ದು, ಸರ್ವೇಯರ್ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಮುಂದಿನ ದಿನಗಳಲ್ಲಿ ಇನ್ನೂ 5 ಸಾವಿರ ರೋವರ್ ಖರೀದಿಗೆ ಸರ್ಕಾರ ನಿರ್ಧರಿಸಲಾಗಿದೆ.
ರೋವರ್ ಉಪಕರಣದ ಕೆಲಸವೇನು? : 5 ಕೆಜಿ ತೂಕದ ಚೈನ್ ಹಿಡಿದು ಸರ್ವೇಯರ್‌ಗಳು ತಾಸುಗಟ್ಟಲೆ ಜಮೀನು ಅಳೆಯುವುದು ಸವಾಲಿನ ಕೆಲಸವಾಗಿತ್ತು. ಗುಡ್ಡಗಾಡು, ಕೆರೆ, ಅರಣ್ಯ ಪ್ರದೇಶಗಳಲ್ಲಿ ಸರ್ವೇ ಮತ್ತಷ್ಟು ಕ್ಲಿಷ್ಟರವಾಗಿತ್ತು. ರೋವರ್ ಉಪಕರಣದಿಂದ ಇದು ಸುಲಭವಾಗಿದೆ. ಇದು ಕೇವಲ 800 ಗ್ರಾಂ ಇದ್ದು, ಆಧುನಿಕ ತಂತ್ರಜ್ಞಾನ ಉಪಕರಣವಾಗಿದೆ. ಸರ್ವೇ ಆಫ್ ಇಂಡಿಯಾ ರಾಜ್ಯದಲ್ಲಿ 49 ಕಂಟಿನ್ಯೂಸ್ಲಿ ಆಪರೇಟಿಂಗ್ ರೆಫರೆನ್ಸ್ ಸ್ಟೇಷನ್ (ಸಿಒಆರ್‌ಎಸ್) ಸ್ಥಾಪನೆ ಮಾಡಿದೆ. ಇದರೊಂದಿಗೆ ರೋವರ್ ಸಂಪರ್ಕ ಕಲ್ಪಿಸಿ ಜಮೀನು ಸರ್ವೇ ನಡೆಸಿದಾಗ ಸ್ವಯಂಚಾಲಿತವಾಗಿ ಗಡಿ ಗುರುತು ಮಾಡಿ ಟ್ಯಾಬ್‌ಗೆ ಸಂಪರ್ಕ ನೀಡಲಿದೆ. ಹತ್ತು ನಿಮಿಷದಲ್ಲಿ ನಕ್ಷೆ ಕೊಡಲಿದೆ.














