ಜುಲೈ : ಕೆಲ ದಿನಗಳ ಹಿಂದೆ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ಆಗಿ ಗೌತಮ್ ಗಂಭೀರ್ ಅವರು ನೇಮಕವಾಗಿದ್ದಾರೆ. 2024ರ ಟಿ20 ವಿಶ್ವಕಪ್ ಬಳಿಕ ಚಾಂಪಿಯನ್ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು.
ಇದೀಗ ಗೌತಮ್ ಗಂಭೀರ್ ಅವರನ್ನು ಭಾರತ ತಂಡದ ಹೆಡ್ ಕೋಚ್ ಆಗಿ ಮಾಡಲಾಗಿದೆ. ಶ್ರೀಲಂಕಾ ಪ್ರವಾಸದಿಂದ ಟೀಮ್ ಇಂಡಿಯಾ ಜವಾಬ್ದಾರಿಯನ್ನು ಗಂಭೀರ್ ವಹಿಸಿಕೊಳ್ಳಲಿದ್ದಾರೆ. ಜವಾಬ್ದಾರಿ ವಹಿಸಿಕೊಳ್ಳುವ ಮುನ್ನ ಗಂಭೀರ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದೆ ದೊಡ್ಡ ಬೇಡಿಕೆ ಇಟ್ಟಿದ್ದಾರೆ.
ಮಾಧ್ಯಮ ವರದಿಯ ಪ್ರಕಾರ, ಭಾರತಕ್ಕೆ ಹೊಸದಾಗಿ ನೇಮಕಗೊಂಡ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ತಂಡದ ಕೋಚಿಂಗ್ ಸ್ಟಾಫ್‌ನಲ್ಲಿ ಮಾಜಿ ಡಚ್ ಕ್ರಿಕೆಟಿಗ ರಿಯಾನ್ ಟೆನ್ ಡೋಸ್ಚೇಟ್ ಅವರನ್ನು ಸೇರಿಸಿಕೊಳ್ಳಲು ಬಿಸಿಸಿಐಗೆ ಸೂಚಿಸಿದ್ದಾರೆ.
ನೆದರ್ಲ್ಯಾಂಡ್ಸ್ ಕ್ರಿಕೆಟಿಗ ರಿಯಾನ್ ಟೆನ್ ಡೋಸ್ಕೇಟ್ ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಗಂಭೀರ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಕೆಕೆಆರ್‌ಗೆ ಫೀಲ್ಡಿಂಗ್ ಕೋಚ್ ಆಗಿ ರಿಯಾನ್ ಟೆನ್ ಡೋಸ್ಕೇಟ್ ಉತ್ತಮ ಕೊಡುಗೆ ನೀಡಿದ್ದಾರೆ.
ಗಂಭೀರ್ ಅವರ ಈ ಬೇಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಂತಿಮ ಅಧಿಕಾರ ಬಿಸಿಸಿಐಗಿದೆ. ಟೆನ್ ಡೋಸ್ಕೇಟ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್, ಮೇಜರ್ ಲೀಗ್ ಕ್ರಿಕೆಟ್ ಮತ್ತು ಐಎಲ್‌ಟಿ -20 ಟೂರ್ನಿಗಳಲ್ಲಿ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿರುವ ಅನುಭವವನ್ನು ಹೊಂದಿದ್ದಾರೆ.
ಇದಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು
ಟೀಮ್ ಇಂಡಿಯಾದ ಕೋಚಿಂಗ್ ಸ್ಟಾಫ್‌ಗೆ ಸೇರಿಕೊಳ್ಳಬಹುದು ಎಂದು ಕ್ರಿಕ್‌ಬಜ್ ವರದಿಯಲ್ಲಿ ಹೇಳಿತ್ತು.
ಆಟಗಾರನಾಗಿ ಒಂದು ಟಿ20 ವಿಶ್ವಕಪ್, ಒಂದು ಏಕದಿನ ವಿಶ್ವಕಪ್, ನಾಯಕನಾಗಿ ಎರಡು ಐಪಿಎಲ್ ಟ್ರೋಫಿ, ಮೆಂಟರ್ ಆಗಿ ಒಂದು ಐಪಿಎಲ್ ಟ್ರೋಫಿ ಗೆದ್ದಿರುವ ಗೌತಮ್ ಗಂಭೀರ್ ಅವರು ಕೋಚ್ ಆಗುವುದರೊಂದಿಗೆ ಟೀಂ ಇಂಡಿಯಾ ಹೊಸ ಬದಲಾವಣೆಗೆ ತೆರೆದುಕೊಂಡಿದೆ. ಅವರ ಗೇಮ್ ಸ್ಟ್ರಾಟಜಿ, ಆಟವನ್ನು ನೋಡಿರುವ ಬಿಸಿಸಿಐ ಸಣ್ಣ ವಯಸ್ಸಿಗೆ ದೊಡ್ಡ ಹುದ್ದೆಯನ್ನು ನೀಡಿದೆ. ಇದಕ್ಕಾಗಿ ಅವರಿಗೆ ಬಹಳ ದೊಡ್ಡ ಮೊತ್ತದ ಸ್ಯಾಲರಿಯನ್ನು ಕೂಡ ಬಿಸಿಸಿಐ ನೀಡುತ್ತಿದೆ ಎಂದು ತಿಳಿದುಬಂದಿದೆ.
ಟಿ20 ವಿಶ್ವಕಪ್ ವೇಳೆಯೇ ಹೊಸ ಕೋಚ್ ಹೆಸರು ಘೋಷಣೆ ಆಗ್ಬೇಕಿತ್ತು. ಆದರೆ, ವೇತನದ ವಿಷಯವಾಗಿ ಗಂಭೀರ್ ಮತ್ತು ಬಿಸಿಸಿಐ ನಡುವೆ ಒಮ್ಮತ ಮೂಡದ ಹಿನ್ನೆಲೆ ಘೋಷಣೆ ವಿಳಂಬವಾಗಿದೆ ಎನ್ನಲಾಗಿದೆ. ಗೌತಮ್ ಗಂಭೀರ್ ಅವರು ರಾಹುಲ್ ದ್ರಾವಿಡ್ ಅವರು ಪಡೆದ ಸ್ಯಾಲರಿಗಿಂತಲೂ ಅಧಿಕ ವೇತನ ಕೇಳಿದ್ದಾರೆಂಬ ಮಾಹಿತಿ ಇದೆ. ರಾಹುಲ್ ದ್ರಾವಿಡ್ ಅವರು ವಾರ್ಷಿಕ 12 ಕೋಟಿ ರೂ. ವೇತನವನ್ನು ಪಡೆಯುತ್ತಿದ್ದರು. ಗೌತಮ್ ಗಂಭೀರ್ ಅವರ ವೇತನ ವಾರ್ಷಿಕ 15 ಕೋಟಿ ರೂಪಾಯಿಗೂ ಅಧಿಕ ಇದೆ ಎಂಬ ಮಾಹಿತಿ ಇದ್ದು, ಬಿಸಿಸಿಐ ವೇತನದ ಮಾಹಿತಿಯನ್ನು ಗೌಪ್ಯವಾಗಿಟ್ಟಿದೆ.









