ದೇಶದಲ್ಲಿ ನಗದು ರಹಿತ ವಹಿವಾಟಿಗೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಮತ್ತೊಂದು ಹೊಸ ಕಾರ್ಯಕ್ರಮ ಆರಂಭಿಸಿದೆ.ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇ-ರುಪಿ (ಎಲೆಕ್ಟ್ರಾನಿಕ್ ವೋಚರ್ ಆಧಾರಿತ ಡಿಜಿಟಲ್ ಪಾವತಿ) ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಿದ್ದಾರೆ. e-RUPI ಡಿಜಿಟಲ್ ಪಾವತಿಯಾಗಿದ್ದು, ನಗದುರಹಿತ ಸಾಧನವಾಗಿದೆ.
ಇ-ರುಪಿ ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ಸರ್ಕಾರದಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಬಲಪಡಿಸುವಲ್ಲಿ ಇ-ರುಪಿ ವೋಚರ್ ಪ್ರಮುಖ ಪಾತ್ರ ವಹಿಸಲಿದೆ. ಎಲ್ಲರಿಗೂ ಉದ್ದೇಶಿತ, ಪಾರದರ್ಶಕ ಮತ್ತು ಸೋರಿಕೆ ರಹಿತ ವಿತರಣೆಯನ್ನು ಖಾತ್ರಿಪಡಿಸಿಕೊಳ್ಳಲು ಇ-ರೂ ಸಹಾಯ ಮಾಡುತ್ತದೆ.ಈ ವ್ಯವಸ್ಥೆ ನ್ಯಾಷನಲ್ ಪೇಮೆಂಟ್ಸ್ ಆಫ್ ಇಂಡಿಯಾ, ಆರ್ಥಿಕ ಸಚಿವಾಲಯ, ಆರೋಗ್ಯ ಸಚಿವಾಲಯ, ನ್ಯಾಷನಲ್ ಹೆಲ್ತ್ ಅಥಾರಿಟಿ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದ್ದಾರೆ.
ಏನಿದು ಇ-ರುಪಿ..? ಇದು ಹೇಗೆ ಕಾರ್ಯನಿರ್ವಹಿಸುತ್ತದೆ
‘ಇ-ರುಪಿ’ ಒಂದು ನಗದುರಹಿತ, ಸ್ಪರ್ಶರಹಿತ ಡಿಜಿಟಲ್ ಪಾವತಿಯ ಸಾಧನವಾಗಿದೆ. ಇದು ಫಲಾನುಭವಿಗಳ ಮೊಬೈಲ್ ಫೋನ್‌ಗಳಿಗೆ ಬರುವ ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಮೂಲಕ ಇ-ವೋಚರ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಇ-ರುಪಿ, ಸೇವಾ
ಪ್ರಾಯೋಜಕರನ್ನು ಫಲಾನುಭವಿಗಳು ಹಾಗೂ ಸೇವೆ ಒದಗಿಸುವವರೊಂದಿಗೆ, ಯಾವುದೇ ಭೌತಿಕ ಸಂಪರ್ಕವಿಲ್ಲದೆ ಡಿಜಿಟಲ್ ರೂಪದಲ್ಲಿ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ವಹಿವಾಟು ಪೂರ್ಣಗೊಂಡ ನಂತರ ಮಾತ್ರ ಸೇವೆ ಒದಗಿಸುವವರಿಗೆ ಪಾವತಿ ತಲುಪುವುದನ್ನು ಖಾತ್ರಿಪಡಿಸುತ್ತದೆ. ಪ್ರೀಪೇಯ್ಡ್ ರೂಪದಲ್ಲಿರುವ ಈ ತಂತ್ರಜ್ಞಾನ ವ್ಯವಸ್ಥೆ ಯಾವುದೇ ಮಧ್ಯಸ್ಥಿಕೆದಾರರು ಇಲ್ಲದೆ, ಸಮಯಕ್ಕೆ ಸರಿಯಾದ ರೀತಿ ತಲುಪುವುದನ್ನು ಖಾತ್ರಿಪಡಿಸುತ್ತದೆ.
ಸ್ಮಾರ್ಟ್ಫೋನ್ ಇಲ್ಲದವರು ಎಸ್‌ಎಂಎಸ್ ಅಥವಾ ಕ್ಯೂ ಆರ್ ಕೋಡ್ ಬಳಕೆ ಮಾಡಿ ಹಣವನ್ನು ಪಾವತಿ ಮಾಡುವ ಆಯ್ಕೆ ಇದರಲ್ಲಿದೆ. ಇದರಿಂದ ಇಂಟರ್ನೆಟ್ ವ್ಯವಸ್ಥೆ ಇಲ್ಲದ ಫೋನ್ಗಳನ್ನು ಬಳಸುವವರಿಗೆ ಕೂಡ ಡಿಜಿಟಲ್ ಪೇಮೆಂಟ್ಗೆ ಅನುಕೂಲವಾಗಲಿದೆ. ನೆಟ್ ಬ್ಯಾಂಕಿಂಗ್, ಆನ್ಲೈನ್ ಪೇಮೆಂಟ್ ಆ್ಯಪ್ಗಳನ್ನು ಬಳಸದೆ ಸುಲಭವಾಗಿ ಹಣ ಪಾವತಿ ಮಾಡುವ ಆಯ್ಕೆಯೇ ಇ-ರುಪಿ. ಇದು ಇ-ವೋಚರ್ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತದೆ.















