ಬೀಜಿಂಗ್:ತನ್ನ ದೇಶದ ರಕ್ಷಣೆಗೆ, ಶತ್ರುಗಳ ಮೇಲೆ ದಾಳಿಗೆ ಅತ್ಯಾಧುನಿಕ ಕ್ಷಿಪಣಿ, ಯುದ್ಧ ವಿಮಾನ, ಸಬ್ ಮರೀನ್ ಸೇರಿದಂತೆ ಅತ್ಯಾಧುನಿಕ ಯುದ್ಧ ಪರಿಕರಗಳನ್ನು ಜಗತ್ತಿನ ಎಲ್ಲಾ ದೇಶಗಳು ಅಭಿವೃದ್ಧಿಪಡಿಸುತ್ತಿವೆ ಮತ್ತು ಬಳಸುತ್ತಿವೆ.ಇದೀಗ ಚೀನಾ ಸೇನೆ ಸ್ವಯಂ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ರೋಬೋಟ್ ಅಭಿವೃದ್ಧಿ ಪಡಿಸಿದೆ. ಕಳೆದ ಕೆಲ ದಿನಗಳಿಂದ ತೈವಾನ್ ಸುತ್ತಮುತ್ತಲೂ ಭಾರೀ ಪ್ರಮಾಣದ ನೌಕಾ ಕಸರತ್ತು ನಡೆಸುತ್ತಿರುವ ಚೀನಾ ಸೇನೆ, ಈ ವೇಳೆ ತನ್ನ ರೋಬೋಟ್ ನಾಯಿಯನ್ನು ಬಳಸಿ ಪ್ರದರ್ಶನ ನೀಡಿದೆ. ಈ ಕುರಿತ ವಿಡಿಯೋ ಇದೀಗ ಜಾಗತಿಕ ಸೇನಾ ವಲಯದಲ್ಲಿ ಭಾರೀ ಸದ್ದು ಮಾಡಿದೆ.
15 -50 ಕೆಜಿ ತೂಕ ಇರುವ ಈ ರೋಬೋ ನಾಯಿಗೆ 4ಡಿ ಸೂಪರ್ ವೈಡ್ ಆ್ಯಂಗಲ್ ಸೆನ್ಸಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಜೊತೆಗೆ ಅದರೊಳಗೆ ಬ್ಯಾಟರಿ ಮತ್ತು ಪವರ್ ಸಿಸ್ಟಮ್ ಕೂಡಾ ಇದೆ. ಈ ರೋಬೋ ನಾಯಿ ಹಿಂದೆ, ಮುಂದೆ, ಅಕ್ಕ, ಪಕ್ಕ ಯಾವುದೇ ಕಡೆ ಬೇಕಾದರೂ ಚಲಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಸಾಮಾನ್ಯ ನಾಯಿಯಂತೆ ಬಗ್ಗುವ, ಹಾರುವ, ಸಾಗುವ ಹಾದಿಯಲ್ಲಿ ಯಾವುದೇ ಅಡೆತಡೆ ಎದುರಾದರೆ ಸ್ವಯಂ ತನ್ನ ಚಲನವಲನ ನಿರ್ಧರಿಸುವ ಸಾಮರ್ಥ್ಯ ಹೊಂದಿದೆ.
ಒಮ್ಮೆ ಚಾರ್ಜ್ ಮಾಡಿದರೆ 2 ರಿಂದ 4 ಗಂಟೆ ಕಾಲ ಗುಂಡಿನ ದಾಳಿ ನಡೆಸಬಲ್ಲದು. ನಾಯಿಯ ತಲೆಯ ಮೇಲ್ಬಾಗದಲ್ಲಿ ಅತ್ಯಾಧುನಿಕ ಗನ್ ಅಳವಡಿಸಲಾಗಿದ್ದು, ಅದರ ಮೂಲಕ ಗುಂಡು ಹಾರಿಸಬಲ್ಲದಾಗಿದೆ. ಇದು
ತಾನು ಇರುವ ಸ್ಥಳದ ಸುತ್ತಲಿನ ಪ್ರತಿ ಬೆಳವಣಿಗೆಯ ಕುರಿತು ತತ್ಕ್ಷಣದ ಮಾಹಿತಿಯನ್ನು ನಿರ್ವಾಹಕರಿಗೆ ರವಾನಿಸುತ್ತದೆ. ಅದನ್ನು ಆಧರಿಸಿ ರಿಮೋಟ್ ಮೂಲಕ ರೋಬೋಟ್ ನಿರ್ವಹಿಸುವವರು ನಾಯಿಯನ್ನು ಎಲ್ಲಿಗೆ ಬೇಕಾದರೂ ಕಳುಹಿಸಬಹುದು ಮತ್ತು ಹೇಗೆ ಬೇಕಾದರೂ ದಾಳಿ ಮಾಡಬಹುದು.
ಎದುರಾಳಿಗಳ ದಾಳಿ ತಡೆಯುವ ವೇಳೆ ಅಥವಾ ಅವರ ಮೇಲೆ ದಾಳಿ ನಡೆಸುವ ವೇಳೆ ಯೋಧರು ಗುಂಡಿನ ದಾಳಿಗೆ ತುತ್ತಾಗಿ ಗಾಯಗೊಳ್ಳುವ ಅಥವಾ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಆದರೆ ರೋಬೋ ಬಳಸಿದರೆ ಅಂಥ ಅಪಾಯ ಇರದು. ಜೊತೆಗೆ ಇವುಗಳ ಚಲನೆಯ ವೇಗ ಕೂಡಾ ಯೋಧರಿಗಿಂತ ಹೆಚ್ಚಿರುತ್ತದೆ. ಜೊತೆಗೆ ತನ್ನ ಸುತ್ತಲೂ 360 ಡಿಗ್ರಿ ಪ್ರದೇಶದಲ್ಲಿ ಆಗುವ ಪ್ರತಿ ಚಲನವಲನಗಳ ಮೇಲೂ ಕಣ್ಣಿಡುವ ಸಾಮರ್ಥ್ಯ ಇದಕ್ಕಿರುತ್ತದೆ.










