ನವದೆಹಲಿ: ಮೂರನೇ ಭಾರಿಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಅಧಿಕಾರ ಹಿಡಿದ ಬೆನ್ನಲ್ಲೆ ಎರಡನೇ ಭಾರಿಗೆ ಬಿಜೆಪಿ ಸಂಸದ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್ ಆಗಿ ಬುಧವಾರ ಆಯ್ಕೆಯಾದರು.
ಈ ಮೊದಲು ಓ ಬಿರ್ಲಾ ಅವರು 2019 ರಿಂದ 2024 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದು, ಇದೀಗ ಮುಂದಿನ 2029ರವರೆಗೆ ಮತ್ತೆ ಎರಡನೇ ಭಾರಿಗೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾವನೆಯನ್ನು ಮಂಡಿಸಿದ್ದಾರೆ. ಈ ಪ್ರಸ್ತಾಪವನ್ನು ಬಿಜೆಪಿಯ ಹಿರಿಯ ನಾಯಕರು ಮತ್ತು ಅದರ ಮಿತ್ರಪಕ್ಷಗಳಾದ ಟಿಡಿಪಿ, ಜೆಡಿಯು, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಚಿರಾಗ್ ಪಾಸ್ವಾನ್ ಅವರ
ಎಲ್ಜೆಪಿ ಅನುಮೋದಿಸಿತು.
18ನೇ ಲೋಕಸಭಾ ಈ ಸ್ಪೀಕರ್ ಹುದ್ದೆಗೆ INDIA ಬಣದಿಂದ ಕೋಡಿಕುನ್ನಿಲ್ ಸುರೇಶ್ ಹಾಗೂ ಎನ್ಡಿಎ ಮೈತ್ರಿಕೂಟದಿಂದ ಓಂ ಬಿರ್ಲಾ ಅವರು ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.
ಎನ್ಡಿಎ ಅಭ್ಯರ್ಥಿ ಓಂ ಬಿರ್ಲಾಗೆ 297 ಸಂಸದರ ಬೆಂಬಲವಿದ್ದರೆ ವಿಪಕ್ಷಗಳ ಅಭ್ಯರ್ಥಿಗೆ 232 ಸಂಸದರ ಬೆಂಬಲವಿತ್ತು.ಸಾಮಾನ್ಯವಾಗಿ ಲೋಕಸಭಾ ಸ್ಪೀಕರ್ ಆಯ್ಕೆ ಸಹಮತದಿಂದ ನಡೆಯುತ್ತದೆಯಾದರೂ ಈ ಬಾರಿ ಉಪ ಸ್ಪೀಕರ್ ಹುದ್ದೆಯನ್ನು ವಿಪಕ್ಷಗಳಿಗೆ ನೀಡಬೇಕೆಂಬ ಆಗ್ರಹಕ್ಕೆ ಸರ್ಕಾರ ಮನ್ನಣೆ ನೀಡದೇ ಇದ್ದ ಕಾರಣ ವಿಪಕ್ಷಗಳೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು.









