'ಕಾನೂನು ಪ್ರಕಾರ ಎಲೆಕ್ಷನ್​, ಶಂಕೆ ಇದ್ದರೆ ಚರ್ಚೆಗೆ ಬನ್ನಿ': ರಾಹುಲ್​ ಗಾಂಧಿಗೆ ಚುನಾವಣಾ ಆಯೋಗದ ಆಹ್ವಾನ

Coastal Bulletin
'ಕಾನೂನು ಪ್ರಕಾರ ಎಲೆಕ್ಷನ್​, ಶಂಕೆ ಇದ್ದರೆ ಚರ್ಚೆಗೆ ಬನ್ನಿ': ರಾಹುಲ್​ ಗಾಂಧಿಗೆ ಚುನಾವಣಾ ಆಯೋಗದ ಆಹ್ವಾನ

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೋಲ್​ ಮಾಲ್​ ನಡೆದಿದೆ ಎಂದು ಆರೋಪಿಸುತ್ತಲೇ ಇರುವ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್​ ಗಾಂಧಿ ಅವರನ್ನು ಈ ಬಗ್ಗೆ ಮುಕ್ತವಾಗಿ ಚರ್ಚಿಸಲು ಬರುವಂತೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಆಹ್ವಾನ ನೀಡಿದೆ.

ಚುನಾವಣೆ ಕುರಿತು ರಾಹುಲ್​ ಗಾಂಧಿ ಅವರು ಪ್ರಮುಖ ಪತ್ರಿಕೆಯೊಂದಕ್ಕೆ ಬರೆದ ಲೇಖನಕ್ಕೆ ಉತ್ತರವೆಂಬಂತೆ ಇಮೇಲ್​ ಮೂಲಕ ಪತ್ರ ರವಾನಿಸಿರುವ ಆಯೋಗ, ದೇಶದಲ್ಲಿನ ಯಾವುದೇ ಚುನಾವಣೆಗಳನ್ನು ಕಾನೂನುಬದ್ಧವಾಗಿಯೇ ನಡೆಸಲಾಗುತ್ತದೆ. ಆದಾಗ್ಯೂ, ತಮಗೆ ಅನುಮಾನ ಮತ್ತು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಲು ನೀವೇ ಸಮಯ ಮಾಡಿಕೊಂಡು ಚರ್ಚೆಗೆ ಬನ್ನಿ ಎಂದು ಸೂಚಿಸಿದೆ.

ಚುನಾವಣೆಗಳ ಪಾರದರ್ಶಕತೆ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ನೀಡಲಾಗಿದೆ. ಆದಾಗ್ಯೂ, ನಿಮ್ಮ ಅನುಮಾನಗಳು ಬಗೆಹರಿದಿಲ್ಲ. ನಿಮಗೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಆಯೋಗಕ್ಕೆ ಪತ್ರ ಬರೆಯಬಹುದು ಅಥವಾ ನಮ್ಮೊಂದಿಗೆ ಸಭೆ, ಸಂವಾದ ನಡೆಸಲು ತಾವೇ ಖುದ್ದಾಗಿ ಬಿಡುವು ಮಾಡಿಕೊಂಡು ಮಾತುಕತೆಗೆ ಬರಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮಹಾರಾಷ್ಟ್ರ ಚುನಾವಣೆ ಬಗ್ಗೆ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವಿಕೇಂದ್ರೀಕೃತ ರೀತಿಯಲ್ಲಿ ನಡೆಸಲಾಗಿದೆ. 1,00,186 ಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು, 288 ಚುನಾವಣಾ ನೋಂದಣಿ ಅಧಿಕಾರಿಗಳು, 139 ಸಾಮಾನ್ಯ ವೀಕ್ಷಕರು, 41 ಪೊಲೀಸ್ ವೀಕ್ಷಕರು, 71 ವೆಚ್ಚ

ವೀಕ್ಷಕರು ಮತ್ತು 288 ಚುನಾವಣಾ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್​ನ 28,421 ಏಜೆಂಟರು ಸೇರಿ ವಿವಿಧ ರಾಜಕೀಯ ಪಕ್ಷಗಳಿಂದ ನೇಮಿಸಲ್ಪಟ್ಟ 1,08,026 ಬೂತ್ ಮಟ್ಟದ ಏಜೆಂಟ್‌ಗಳು ಚುನಾವಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದೆ.

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಅದಕ್ಕೆ ಸಂಬಂಧಿಸಿದ ದೂರುಗಳನ್ನು ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಿಲ್ಲ ಎಂದು ಕೇಳಿರುವ ಆಯೋಗ, ನಿಮಗೆ ಇನ್ನೂ ಯಾವುದೇ ಸಮಸ್ಯೆಗಳಿದ್ದರೆ, ವೈಯಕ್ತಿಕವಾಗಿ ಭೇಟಿ ಮಾಡಿ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸಿದ್ಧ. ಸಂವಾದಕ್ಕಾಗಿ ನಿಮಗೆ ಅನುಕೂಲಕರ ದಿನಾಂಕ ಮತ್ತು ಸಮಯ ತಿಳಿಸಿ ಎಂದು ಚುನಾವಣಾ ಆಯೋಗ ಹೇಳಿದೆ.

ರಾಹುಲ್ ಗಾಂಧಿ ಆರೋಪವೇನು?: ಕಳೆದ ವರ್ಷ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಜಾಯುತಿ ಮೈತ್ರಿಕೂಟವು ಅಭೂತಪೂರ್ವ ಜಯಗಳಿಸಿತ್ತು. ಕಾಂಗ್ರೆಸ್ ಮುಂದಾಳತ್ವದ ಮಹಾವಿಕಾಸ್ ಅಘಾಡಿ ಕೂಟ ಹೀನಾಯ ಸೋಲು ಕಂಡಿತ್ತು. ಚುನಾವಣೆಯಲ್ಲಿ ಲೋಪವಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ರಾಹುಲ್ ಗಾಂಧಿ ಅವರ ಆರೋಪವಾಗಿದೆ.

Leave a Comment