ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ - ಬಿಜೆಪಿ ಕಾರ್ಯಕರ್ತೆಯ ಕೊಲೆ,ಹಲವರಿಗೆ ಗಾಯ.

Coastal Bulletin
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ - ಬಿಜೆಪಿ ಕಾರ್ಯಕರ್ತೆಯ ಕೊಲೆ,ಹಲವರಿಗೆ ಗಾಯ.

ಕೊಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಭಾರತೀಯ ಜನತಾ ಪಕ್ಷ (BJP) ಮತ್ತು ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಮಹಿಳಾ ಬಿಜೆಪಿ ಕಾರ್ಯಕರ್ತೆ ರಥಿಬಾಲಾ ಆದಿ ಸಾವನ್ನಪ್ಪಿದ್ದಾರೆ. ಇದಲ್ಲದೆ 7 ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಮೇ 22 ರಂದು ತಡರಾತ್ರಿ ನಂದಿಗ್ರಾಮದ ಸೊಂಚೂರದಿಂದ ಈ ಘಟನೆ ನಡೆದಿದ್ದು, ತೃಣಮೂಲ ಪಕ್ಷದ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಗಲಾಟೆ ನಡೆದು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಯ ನಂತರ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ.

ನಂದಿಗ್ರಾಮದಲ್ಲಿ ಕಿಡಿಗೇಡಿಗಳ ದಾಳಿಯಲ್ಲಿ ಪಕ್ಷದ ಕಾರ್ಯಕರ್ತನೋರ್ವ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಟೈರ್‌ಗಳನ್ನು ಸುಟ್ಟು, ಮರದ ಕೊಂಬೆಗಳನ್ನು ಎಸೆದು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಬೆಳಗ್ಗೆಯಿಂದಲೇ ನಂದಿಗ್ರಾಮ ಪೊಲೀಸ್ ಠಾಣೆ ಎದುರು ಬಿಜೆಪಿ ಬೆಂಬಲಿಗರು ಪ್ರತಿಭಟನೆ

ನಡೆಸುತ್ತಿದ್ದರು.

ವಿಷಯದ ಗಂಭೀರತೆಯನ್ನು ಅರಿತ ಕೇಂದ್ರ ಪಡೆಗಳು ನಂದಿಗ್ರಾಮಕ್ಕೆ ಆಗಮಿಸಿ ಲಾಠಿಚಾರ್ಜ್ ನಡೆಸಿವೆ. ಇಲ್ಲಿನ ಸೋಣಚೂರ ಪ್ರದೇಶದಲ್ಲಿ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಇದಲ್ಲದೇ ಇನ್ನೂ ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಬಿಜೆಪಿ ಬೆಂಬಲಿಗರು ಟಿಎಂಸಿ ಬೆಂಬಲಿಗರ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ ಮತ್ತು ಕೆಲವು ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.

ನಂದಿಗ್ರಾಮ ವಿಚಾರವಾಗಿ ಟಿಎಂಸಿ ನಾಯಕ ಸಂತಾನು ಸೇನ್ ಮಾತನಾಡಿ, ಬಿಜೆಪಿ ತನ್ನೊಳಗೆ ಜಗಳವಾಡುತ್ತಿದೆ. ಇದರ ಪರಿಣಾಮವೇ ನಂದಿಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದು ಆ ಬಳಿಕ ಟಿಎಂಸಿ ಮೇಲೆ ಆರೋಪ ಹೊರಿಸಲಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಬಂಗಾಳ ಸೋಲುತ್ತಿದೆ ಎಂಬುದು ಬಿಜೆಪಿಗೆ ಗೊತ್ತಿರುವ ಕಾರಣ ಬಿಜೆಪಿಯವರು ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Comment