ಜೆಡ್ಡಾ (ಸೌದಿ ಅರೇಬಿಯಾ) : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾ ಭೇಟಿಯನ್ನು ದಿಢೀರ್ ಮೊಟಕುಗೊಳಿಸಿ, ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರು ಮಂಗಳವಾರ ಬೆಳಗ್ಗೆ ಎರಡು ದಿನಗಳ ಭೇಟಿಗಾಗಿ ಸೌದಿಗೆ ಪ್ರಯಾಣಿಸಿದ್ದರು. ಜೆಡ್ಡಾದಲ್ಲಿ ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಉಗ್ರ ದಾಳಿ ತಿಳಿದು, ಆಯೋಜಿಸಲಾಗಿದ್ದ ಅಧಿಕೃತ ಭೋಜನಕೂಟವನ್ನು ರದ್ದುಗೊಳಿಸಿ ಭಾರತಕ್ಕೆ ವಿಶೇಷ ವಿಮಾನದಲ್ಲಿ ಬರುತ್ತಿದ್ದಾರೆ. ನಿಗದಿಯಂತೆ ಅವರು ಬುಧವಾರ(ಇಂದು) ರಾತ್ರಿ ಭಾರತಕ್ಕೆ ಮರಳಬೇಕಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌದಿ ರಾಜಕುಮಾರ ಜೊತೆಗಿನ ಸಭೆ 2 ಗಂಟೆ ತಡ: ಮಂಗಳವಾರ ಮಧ್ಯಾಹ್ನ ಜೆಡ್ಡಾಗೆ ಆಗಮಿಸಿದಾಗಲೇ ಪ್ರಧಾನಿಗೆ ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲಿಂದಲೇ ಮೇಲ್ವಿಚಾರಣೆ ನಡೆಸಿದ ಅವರು, ಸೌದಿ ರಾಜಕುಮಾರನ ಜೊತೆ ಸಂಜೆ ನಿಗದಿಯಾಗಿದ್ದ ಸಭೆಯನ್ನು ಎರಡು ಗಂಟೆಗಳ ಕಾಲ ಮುಂಡೂಡಿದ್ದರು.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ದೋವಲ್ ಅವರು ಸೌದಿ ರಾಜಕುಮಾರರಿಗೆ ಕಾಶ್ಮೀರದಲ್ಲಾದ ಘಟನೆ ಮತ್ತು ಪ್ರವಾಸದ ಹಠಾತ್ ರದ್ದು ಕುರಿತು ಮಾಹಿತಿ ನೀಡಿದರು. ಇದಕ್ಕೂ ಮೊದಲು ಜೆಡ್ಡಾದಲ್ಲಿನ ಹೋಟೆಲ್‌ನಲ್ಲಿ ಪ್ರಧಾನಿ ಮೋದಿ ಅವರು
ತುರ್ತು ಆಂತರಿಕ ಸಭೆ ನಡೆಸಿದರು. ಇದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ 12 ಗಂಟೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಕಾಶ್ಮೀರ ಉಗ್ರ ದಾಳಿ ಕುರಿತು ಇಂದು (ಬುಧವಾರ) ದೆಹಲಿಯಲ್ಲಿ ನಡೆಯಲಿರುವ ಭದ್ರತೆ ಕುರಿತ ಸಂಪುಟ ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರವಾಸಿಗರ ಮಾರಣಹೋಮ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ 'ಮಿನಿ ಸ್ವಿಟ್ಜರ್ ಲ್ಯಾಂಡ್' ಎಂದೇ ಪ್ರಸಿದ್ಧವಾಗಿರುವ ಹುಲ್ಲುಗಾವಲು ಪ್ರದೇಶದಲ್ಲಿ ಭಯೋತ್ಪಾದಕರು ಕಂಡ ಕಂಡ ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಇದರಲ್ಲಿ ಇಬ್ಬರು ಕನ್ನಡಿಗರು, ನೌಕಾಪಡೆ, ಗುಪ್ತಚರ ದಳ ಅಧಿಕಾರಿ ಸಾವನ್ನಪ್ಪಿದ್ದಾರೆ. 2019 ರಲ್ಲಿ ಪುಲ್ವಾಮಾ ದಾಳಿಯ ನಂತರದ ಅತ್ಯಂತ ಭೀಕರ ದಾಳಿ ಇದಾಗಿದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಈ ದಾಳಿಯ ಹೊಣೆ ಹೊತ್ತಿದೆ.















