ನವದೆಹಲಿ: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ ನಡೆದಿದ್ದು, ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದಿರುವ ಶಾಕಿಂಗ್ ಘಟನೆ ವರದಿಯಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ಅವರು ಗಾಯಗೊಂಡಿದ್ದಾರೆ. ಸ್ಥಳೀಯ ಸಮಯದ ಪ್ರಕಾರ, ಅವರು ಶನಿವಾರ (ಜುಲೈ 13) ಪೆನ್ಸಿಲ್ವೇನಿಯಾದ ಬಟ್ಲರ್ ನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದಾಗ ಅಲ್ಲಿ ಗುಂಡಿನ ದಾಳಿ ಪ್ರಾರಂಭವಾಗಿದೆ. ಈ ದಾಳಿಯಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ಗಾಯಗೊಂಡಿದ್ದು, ಅವರ ಮುಖದಲ್ಲೆಲ್ಲ ರಕ್ತದ ಕಲೆ ಕಂಡು ಬಂದಿದೆ. ಸುದ್ದಿ ಸಂಸ್ಥೆ AFP ಪ್ರಕಾರ, ಕೂಡಲೇ ಅವರನ್ನು ಸುರಕ್ಷಿತವಾಗಿ ವೇದಿಕೆಯಿಂದ ಕೆಳಗಿಳಿಸಿ ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ್ಯಾಲಿಯಲ್ಲಿ ಗುಂಡಿನ ದಾಳಿಯ ನಂತರ ವೀಡಿಯೊ ಕೂಡ ವೈರಲ್ ಆಗಿದ್ದು, ಇದರಲ್ಲಿ ಟ್ರಂಪ್ ಅವರ ಕಿವಿಯ ಬಳಿ ರಕ್ತ ಹೊರಬರುವುದನ್ನು ಕಾಣಬಹುದು.
ಘಟನೆ ನಡೆದ ತಕ್ಷಣ, ರಹಸ್ಯ ಸೇವಾ ಸಿಬ್ಬಂದಿ ಟ್ರಂಪ್ ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್ ವಕ್ತಾರರು, ‘ಈ ಘೋರ ದಾಳಿಯ ಸಂದರ್ಭದಲ್ಲಿ ತಕ್ಷಣದ ಕ್ರಮ ಕೈಗೊಂಡಿದ್ದಕ್ಕಾಗಿ ಕಾನೂನು ಜಾರಿ ಮತ್ತು ಪ್ರತಿಸ್ಪಂದನೆ ಮಾಡಿದ್ದಕ್ಕೆ ಡೊನಾಲ್ಡ್ ಟ್ರಂಪ್ ಧನ್ಯವಾದ ಹೇಳಿದರು. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಸ್ಥಳೀಯ ವೈದ್ಯರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಭಾನುವಾರ (14 ಜುಲೈ 2024) ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಈ ದಾಳಿಯನ್ನು ಖಂಡಿಸಿದ್ದಾರೆ.









