ನವದೆಹಲಿ: ಏಪ್ರಿಲ್ 14 ಅಂದಾಗ ನೆನಪಿಗೆ ಬರುವುದೇ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ಚೇತನರಾದ ಡಾ.ಬಿ.ಆರ್. ಅಂಬೇಡ್ಕರ್. ಇವತ್ತು ಅವರ 131 ನೇ ಜನ್ಮದಿನ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಭಾರತದ ಸಂವಿಧಾನದ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅವರು ದೇಶದ ಪ್ರಗತಿಗೆ ಅಳಿಸಲಾಗದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
" ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಅವರಿಗೆ ನಮನಗಳು. ಅವರು ಭಾರತದ ಪ್ರಗತಿಗೆ ಅಳಿಸಲಾಗದ ಕೊಡುಗೆಗಳನ್ನು ನೀಡಿದ್ದಾರೆ. ನಮ್ಮ ರಾಷ್ಟ್ರಕ್ಕಾಗಿ ಅವರ ಕನಸುಗಳನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನ," ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ಏಪ್ರಿಲ್ 14, 1891 ರಂದು ಆಗಿನ ಮಧ್ಯ ಪ್ರಾಂತ್ಯದ ಈಗ ಮಧ್ಯಪ್ರದೇಶದ ಇಂದೋರ್ ಬಳಿಯ ಮೊಹೋದಲ್ಲಿ ಜನಿಸಿದರು.
ಡಾ ಬಿಆರ್ ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನವನ್ನು ನೀಡಿದ್ದಲ್ಲದೆ, ದೇಶದ ಕೇಂದ್ರ ಬ್ಯಾಂಕಿಂಗ್ ಸಂಸ್ಥೆಯಾದ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ ಮತ್ತು ನ್ಯಾಯಶಾಸ್ತ್ರಜ್ಞರಾದ ಬಿ ಆರ್ ಅಂಬೇಡ್ಕರ್ ಅವರು ಭಾರತದಲ್ಲಿ ದಲಿತ ಬೌದ್ಧ ಚಳವಳಿಯ ಹಿಂದಿನ ಶಕ್ತಿಯಾಗಿದ್ದರು.
ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ದೀನ ದಲಿತರಿಗಾಗಿ ಹೋರಾಡಿದಲ್ಲದೇ, ಲಿಂಗ ಸಮಾನತೆಯನ್ನು ಬಲವಾಗಿ ನಂಬಿದ್ದರು. ಅವರು ಶಿಕ್ಷಣದ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿ, ಸಮಾಜದ ಎಲ್ಲ ಜನರಿಗೆ ಸಮಾನತೆಯನ್ನು ನೀಡಿ ಜಾತಿ ಅಡೆತಡೆಗಳನ್ನು ತೆಗೆದುಹಾಕಿದ ವ್ಯಕ್ತಿ ಅವರು. ದೀನ ದಲಿತರಿಗೆ ಶಿಕ್ಷಣವನ್ನು ತಲುಪುವಂತೆ ಮಾಡಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವರು ಒತ್ತು ನೀಡಿದರು. ಇಂತಹ ಕಾರ್ಯ ಮಾಡಿದ ಮಹಾನ್ ವ್ಯಕ್ತಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುವುದು.













