ನವದೆಹಲಿ: ನಮ್ಮ ಸರ್ಕಾರ ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದರು.
ಸರ್ಕಾರದ ಸಾಧನೆಗಳ ಕುರಿತು ಸುದೀರ್ಘ ಭಾಷಣ ಮಾಡಿದ ಅವರು, ಇದೇ ವೇಳೆ ಆಮ್ ಆದ್ಮಿ ಪಕ್ಷ, ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಅಪಾರ ಪ್ರಮಾಣದ ಹಣ ಉಳಿಸಿದೆ. ಇದನ್ನು ನಾವು ಆಸೆಗಳ ಗೋಪುರ ಕಟ್ಟಲು ಬಳಸಿಲ್ಲ ಎಂದು ವಿಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು.
ನಾವು ಸುಳ್ಳು ಭರವಸೆಗಳನ್ನು ನೀಡಿಲ್ಲ. ವಾಸ್ತವವಾಗಿ ಜನರ
ಅಭಿವೃದ್ಧಿ ಮಾಡಿದ್ದೇವೆ ಎಂದು ತಿಳಿಸಿದರು.
ದೇಶದಲ್ಲಿ ಸದ್ಯ 780 ಮೆಡಿಕಲ್ ಕಾಲೇಜುಗಳಿವೆ. ಎಸ್‌ಸಿ,ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗಾಗಿ ಸೀಟುಗಳನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಟೀಕಾಸ್ತ್ರ ಪ್ರಯೋಗ: ಕೆಲವರು ತಾವು ಸಾಕಷ್ಟು ತಿಳಿದುಕೊಂಡಿದ್ದೇವೆ ಎಂಬುದನ್ನು ಪ್ರದರ್ಶಿಸಲು ವಿದೇಶಾಂಗ ನೀತಿ ಬಗ್ಗೆ ಮಾತನಾಡುತ್ತಾರೆ. ಅವರು ಹೀಗೆ ಮಾತನಾಡುವುದರಿಂದ ದೇಶಕ್ಕಾಗುವ ತೊಂದರೆಗಳ ಕುರಿತು ಯೋಚಿಸುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕಾಸಮರ ನಡೆಸಿದರು.














