ಮಂಗಳೂರು, ಅಕ್ಟೋಬರ್ 29: ಕೇರಳ (Kerala) ರಾಜ್ಯದ ಕಾಸರಗೋಡಿನಲ್ಲಿ (Kasaragod) ಭಾರಿ ಪಾಟಾಕಿ ಅವಘಡ (Fire crackers Blast) ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ಸೋಮವಾರ ಮಧ್ಯರಾತ್ರಿ ವೀರನಾರ್ಕವ್ ದೇವಸ್ಥಾನದಲ್ಲಿ ತೆಯ್ಯಂಕೆಟ್ಟು ಮಹೋತ್ಸವ ನಡೆಯುತ್ತಿತ್ತು. ಉತ್ಸವದ ವೇಳೆ ಪಟಾಕಿ ಸಿಡಿಸುವಾಗ, ಅಲ್ಲೇ ಇದ್ದ ಪಟಾಕಿ ಗೋದಾಮಿಗೆ ಬೆಂಕಿ ತಗುಲಿದೆ. ಪಟಾಕಿಗಳು ಬಾಂಬ್ ರೀತಿ ಸಿಡಿದಿವೆ. ಉತ್ಸವದಲ್ಲಿ ಸೇರಿದ್ದ ಜನರ ಮೇಲೆ ಪಟಾಕಿ ಕಿಡಿ ಸಿಡಿದಿದೆ. ಕೆಲವರ ಮೈಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ನೀಲೇಶ್ವರಂ, ಕಾಞಂಗಾಡು ಮತ್ತು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟದ ತೀವ್ರತೆಯಿಂದ ಗೋದಾಮಿನ ಗೋಡೆಗಳು ಛಿದ್ರಗೊಂಡವೆ.
ಘಟನೆಯಲ್ಲಿ ಗಾಯಗೊಂಡವರನ್ನು ಕಾಸರಗೋಡು, ಕಣ್ಣೂರು, ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು, ದುರಂತದ ಕ್ಷಣವನ್ನು ಸೆರೆಹಿಡಿಯಲಾಗಿದೆ.
ಅವಘಡದಲ್ಲಿ ಗಾಯಗೊಂಡ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾಧಿಕಾರಿ ಇಂಪಾಶೇಖರ್ ತಿಳಿಸಿದ್ದಾರೆ.
ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. 80 ರಷ್ಟು ಸುಟ್ಟ ಗಾಯಗಳಾಗಿರುವ ಸಂದೀಪ್ ಅವರನ್ನು ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇತರ ನಾಲ್ವರನ್ನು ಪರಿಯಾರಂಗೆ ಸ್ಥಳಾಂತರಿಸಲಾಗಿದೆ. ವರದಿಗಳ ಪ್ರಕಾರ, ಅಂಜುಟ್ಟಂಬಲಂ ವೀರರ್ ಕಾವು ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಬಂಧಿಸಲಾಗಿದೆ.