Coastal Bulletin

ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ದಿನಕ್ಕೆ 90 ಸಾವಿರ ಭಕ್ತರಿಗಷ್ಟೇ ದರುಶನಕ್ಕೆ ಅವಕಾಶ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೊಸ ಆದೇಶ ಹೊರಡಿಸಿದೆ.

ದಿನೇ ದಿನೇ ಶಬರಿಮಲೆ ಬರುವ ಭಕ್ತರ ಸಂಖ್ಯೆ ಅಧಿಕವಾಗುತ್ತಿದ್ದು, ಹೀಗಾಗಿ ದಿನಕ್ಕೆ 90 ಸಾವಿರ ಮಂದಿ ಭಕ್ತರಿಗಷ್ಟೇ ಅವಕಾಶ ನೀಡಲು ಕೇರಳ ಸರ್ಕಾರ ಮತ್ತು ದೇಗುಲದ ಆಡಳಿತ ಮಂಡಳಿ ಸೋಮವಾರ ತೀರ್ಮಾನಿಸಿದೆ.

ಇದೇ ವೇಳೆ ದೇವರ ದರುಶನ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದ್ದು, ಇದರೊಂದಿಗೆ, ದೇವಾಲಯದ ಬಾಗಿಲುಗಳು ಭಕ್ತರಿಗಾಗಿ ದಿನಕ್ಕೆ 19 ಗಂಟೆಗಳ ಕಾಲ ಅಂದರೆ ಬೆಳಿಗ್ಗೆ 3 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11.30 ರವರೆಗೆ ತೆರೆದಿರುತ್ತವೆ ಎಂದು TDB ಅಧ್ಯಕ್ಷ ಕೆ ಅನಂತಗೋಪಾಲನ್ ಮಾಹಿತಿ ನೀಡಿದ್ದಾರೆ.

ಹರಿವರಾಸನ ಪಠಣದ ಸಮಯದಲ್ಲಿ ಭಕ್ತರಿಗೆ ಎಲ್ಲಾ ಸರತಿ ಸಾಲುಗಳ

ಮೂಲಕ ಹೋಗಲು ಅವಕಾಶ ನೀಡಲಾಗುವುದು. 'ಸರಮಕುತಿ'ಯಿಂದ 'ನಡಪಂಥಲ್'ವರೆಗೆ ನೀರು ಮತ್ತು ಬಿಸ್ಕತ್ಗಳನ್ನು ವಿತರಿಸಲಾಗುವುದು. ತರಬೇತಿ ಪಡೆದ ಪೊಲೀಸರನ್ನು 'ಪತಿನೆಟ್ಟಂ ಪಾಡಿ' (18 ಪವಿತ್ರ ಮೆಟ್ಟಿಲುಗಳು) ನಲ್ಲಿ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ 19,17,385 ಜನರು ಆನ್ಲೈನ್ನಲ್ಲಿ ಬುಕ್ ಮಾಡಿದ್ದಾರೆ ಮತ್ತು ಕಳೆದ ಭಾನುವಾರದವರೆಗೆ ಒಟ್ಟು 14,98,824 ಜನರು ದೇವಾಲಯಕ್ಕೆ ಭೇಟಿ ಅಯ್ಯಪ್ಪ ಸ್ವಾಮಿ ದರುಶನ ಪಡೆದಿದ್ದಾರೆ ಎಂದು ಟಿಡಿಬಿ ಅಧ್ಯಕ್ಷರು ತಿಳಿಸಿದ್ದಾರೆ.

ಭಕ್ತರ ಸಂದಣಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಎಂದು ಕೇರಳ ಹೈಕೋರ್ಟ್ ಭಾನುವಾರ ಪಥನಂತ್ತಿಟ್ಟ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ ಬಳಿಕ ಸರ್ಕಾರವು ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.

Leave a Comment