ದಕ್ಷಿಣ ಇರಾಕ್‌ನ ನಾಸಿರಿಯಾ ನಗರದ ಕೊವಿಡ್ ಆಸ್ಪತ್ರೆ ಭೀಕರ ಅಗ್ನಿ ದುರಂತದಲ್ಲಿ 50 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಾಸಿರಿಯಾ ನಗರದ ಹಯಾದರ್ ಅಲ್ ಜಮೀಲಿ ಆಸ್ಪತ್ರೆಯಲ್ಲಿ ದುರ್ಘಟನೆ ಸಂಭವಿಸಿದ್ದು,ಆಕ್ಸಿಜನ್ ಟ್ಯಾಂಕ್ ಸ್ಪೋಟಗೊಂಡಿದ್ದು ಅವಘಡಕ್ಕೆ ಮೂಲಕಾರಣ ಎನ್ನಲಾಗಿದೆ.ಆಸ್ಪತ್ರೆಯ ಒಳಗಿದ್ದ ಆಕ್ಸಿಜನ್ ಟ್ಯಾಂಕ್ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅದು ಸಿಡಿದು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.
ಕೊವಿಡ್ ಐಸೋಲೇಶನ್ ವಾರ್ಡ್ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಟ್ಟಡದೊಳಗಿದ್ದವರು ಸಿಲುಕಿ ಹಾಕಿಕೊಂಡಿದ್ದು, ಅಲ್ಲಿಂದ ತಪ್ಪಿಸಿಕೊಳ್ಳಲಾಗದೇ ಪ್ರಾಣಬಿಟ್ಟಿದ್ದಾರೆ.ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಮೃತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಸುಮಾರು 16ಕ್ಕೂ ಹೆಚ್ಚು ಜನರನ್ನು
ರಕ್ಷಿಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯಷ್ಟೇ ತೆರೆಯಲಾದ ಹೊಸ ವಾರ್ಡ್‌ನಲ್ಲಿ 70 ಹಾಸಿಗೆಗಳಿವೆ.ಅಗ್ನಿ ಅವಘಡ ನಡೆದ ಸಂದರ್ಭದಲ್ಲಿ ಕೊವಿಡ್-19 ವಾರ್ಡಿನಲ್ಲಿ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 63 ಜನರಿದ್ದರು ಎಂದು ಧಿ ಖಾರ್ ಆರೋಗ್ಯ ಇಲಾಖೆಯ ವಕ್ತಾರ ಅಮ್ಮರ್ ಅಲ್-ಜಮಿಲಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊವಿಡ್ ಆಸ್ಪತ್ರೆಯನ್ನು ವೇಗವಾಗಿ ಹೊತ್ತಿಕೊಳ್ಳುವ ವಸ್ತುಗಳಿಂದಲೇ ಕಟ್ಟಲಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಡ್ ಬೆಂಕಿಗೆ ಆಹುತಿಯಾಗಿದೆ ಎಂದು ಇರಾಕ್‌ನ ನಾಗರಿಕ ರಕ್ಷಣಾ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಖಾಲಿದ್ ಬೋಹನ್ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ.















