ಪ್ರಸಿದ್ಧ ಶಿಯಾ ಮಸೀದಿ ಮೇಲೆ ಹಾರಿತು ಕೆಂಪು ಧ್ವಜ – ಪ್ರತೀಕಾರದ ಶಪಥ ಮಾಡಿದ ಇರಾನ್

Coastal Bulletin
ಪ್ರಸಿದ್ಧ ಶಿಯಾ ಮಸೀದಿ ಮೇಲೆ ಹಾರಿತು ಕೆಂಪು ಧ್ವಜ – ಪ್ರತೀಕಾರದ ಶಪಥ ಮಾಡಿದ ಇರಾನ್

ಟೆಹ್ರಾನ್: ಅಮೆರಿಕ, ಇಸ್ರೇಲ್ ಜಂಟಿ ದಾಳಿಯ (Israel-US Attack) ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಇರಾನ್ ಪ್ರತಿದಾಳಿಯ ಆಟ ಮುಂದುವರಿಸಿದೆ. ಇಸ್ರೇಲ್‌ನ ಜೊತೆಗೆ ಇತರೆ ಮುಸ್ಲಿಂ ದೇಶಗಳಲ್ಲಿರುವ ಅಮೆರಿಕ ನೆಲೆಗಳನ್ನು ಧ್ವಂಸ ಮಾಡುತ್ತಿದೆ. ಇರಾನ್‌ಗೆ ಮಧ್ಯಂತರ ಸುಪ್ರೀಂ ನಾಯಕನ ಆಯ್ಕೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಖಾಯಂ ನಾಯಕನ ಆಯ್ಕೆಯೂ ಆಗಲಿದೆ. ಈ ನಡುವೆ ಇರಾನ್ (Iran) ತನ್ನ ಪ್ರಮುಖ ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸಿದ್ದು, ತೀವ್ರ ಸ್ವರೂಪದ ಪ್ರತಿದಾಳಿಯ ಸುಳಿವು ನೀಡಿದೆ.

ಹೌದು, ಇರಾನ್‌ನ ಕೋಮ್ ನಗರದ ಪ್ರಸಿದ್ಧ ಶಿಯಾ ಮಸೀದಿ ಜಮ್ಕರನ್ ಮಸೀದಿಯ (Jamkaran Mosque) ಮೇಲೆ ಕೆಂಪು ಧ್ವಜವನ್ನು ಹಾರಿಸಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿ ಪಡೆಗಳಿಂದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ದೇಶವು ಯುದ್ಧಕ್ಕೆ ಸಿದ್ಧವಾಗಿದೆ ಎಂಬುದರ ಸಾಂಕೇತಿಕ ಸೂಚಕವಾಗಿ ಈ ಧ್ವಜವನ್ನು ಹಾರಿಸಲಾಗಿದೆ. ಶಿಯಾ ಸಂಪ್ರದಾಯದಲ್ಲಿ ಕೆಂಪು ಧ್ವಜವು ಅನ್ಯಾಯವಾಗಿ ಚೆಲ್ಲಿದ ರಕ್ತವನ್ನು ಸಂಕೇತಿಸುತ್ತದೆ ಮತ್ತು ಕೊಲ್ಲಲ್ಪಟ್ಟ ವ್ಯಕ್ತಿಯ ಸೇಡು ತೀರಿಸಿಕೊಳ್ಳಲು ಕರೆಯಾಗಿ ಕಾರ್ಯನಿರ್ವಹಿಸುತ್ತದೆ.

ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವಾರು ಇತರ ನಗರಗಳಲ್ಲಿ ಕೆಂಪು ಧ್ವಜವನ್ನು ಹಾರಿಸಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಶತ್ರುಗಳ ಮಿಲಿಟರಿ ನೆಲೆಗಳನ್ನು ನಾಶಮಾಡುವುದನ್ನು ಇರಾನ್ ಮುಂದುವರಿಸಲಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ. ಅಯತೊಲ್ಲಾ ಅಲಿ ಖಮೀನಿ ಹತ್ಯೆಯನ್ನು ಒಂದು ಮಹಾ ಅಪರಾಧ ಎಂದು ಖಂಡಿಸಿದ್ದ ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್, ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಅಮೆರಿಕ ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ (Ayatollah Ali Khamenei) ನಿಧನರಾಗಿದ್ದಾರೆ. ತನ್ನ ನಾಯಕನ ಸಾವು ಇರಾನ್‌ನೊಳಗೆ ಪ್ರತಿಕಾರದ ಕಿಚ್ಚು ಹೊತ್ತಿಸಿದೆ. ಇಸ್ರೇಲ್ ಅಮೆರಿಕದ ದಾಳಿ ಬಳಿಕ ಇರಾನ್ ಈಗ ಪ್ರತಿದಾಳಿಗಳನ್ನು ಆರಂಭಿಸಿದೆ. ಅಮೆರಿಕದ ಏರ್‌ಕ್ರ‍್ಯಾಫ್ಟ್ ಕ್ಯಾರಿಯರ್ ಅಬ್ರಹಾಂ ಲಿಂಕನ್ ಮೇಲೆ ಇರಾನ್ ನಾಲ್ಕು ಬ್ಯಾಲೆಸ್ಟಿಕ್ ಮಿಸೈಲ್‌ಗಳನ್ನು ಹಾರಿಸಿದೆ.

ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಎಚ್ಚರಿಸಿದೆ. ಇದರ ಜೊತೆಗೆ ಇಸ್ರೇಲ್ ಮೇಲೆಯೂ ದಾಳಿ ನಡೆಸಿದೆ. ಬೀಟ್ ಶೆಮೆಶ್‌ನಲ್ಲಿ ನಡೆಸಿದ ದಾಳಿಯ ನಂತರ ಕನಿಷ್ಠ 10 ಜನರನ್ನು ಕೊಂದಿದೆ. ಇರಾನ್ ಈ ಪ್ರದೇಶದಲ್ಲಿ ಶಾಂತಿಯನ್ನು ಬಯಸುವುದಾಗಿ ಹೇಳಿದೆ. ಈ ಪ್ರದೇಶದಲ್ಲಿನ ಅಮೆರಿಕದ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. ಈ ಮೂಲಕ ಇರಾಕ್, ಕುವೈತ್, ಕತಾರ್ ಮತ್ತು ಬಹ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿರುವ ಅಮೆರಿಕದ ನೆಲೆಗಳು ಮಾತ್ರ ನಮ್ಮ ಟಾರ್ಗೆಟ್ ಎಂದು ಇರಾನ್ ಹೇಳಿದೆ. ಭಾನುವಾರ ಇರಾನ್ ನಡೆಸಿದ

ದಾಳಿಗಳಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಯುಎಇ ಇರಾನ್‌ನ 165 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿದ್ದು, 152 ಕ್ಷಿಪಣಿಗಳನ್ನು ನಾಶಪಡಿಸಿದೆ ಮತ್ತು ಎರಡು ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಒಟ್ಟು 541 ಇರಾನಿನ ಡ್ರೋನ್‌ಗಳನ್ನು ಪತ್ತೆಹಚ್ಚಲಾಗಿದೆ. ಅವುಗಳಲ್ಲಿ 506 ಅನ್ನು ತಡೆಹಿಡಿದು ನಾಶಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇನ್ನು ಬಹ್ರೇನ್‌ನ ರಾಜಧಾನಿ ಮನಾಮದಲ್ಲಿರುವ ಕ್ರೌನ್ ಪ್ಲಾಜಾ ಹೋಟೆಲ್ ಮೇಲೆ ಇರಾನ್‌ನಿಂದ ನಡೆದ ದಾಳಿಯಿಂದ ಕಟ್ಟಡಕ್ಕೆ ಹಾನಿಯಾಗಿದೆ. ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಇದಕ್ಕೂ ಮುನ್ನ ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು.

ಆಪರೇಷನ್ ಎಪಿಕ್ ಫ್ಯೂರಿಯ ಭಾಗವಾಗಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಮೆರಿಕ ಹೇಳಿಕೊಂಡಿದೆ. ಸಣ್ಣಪುಟ್ಟ ಗಾಯಗೊಂಡ ಹಲವಾರು ಇತರ ಸೇನಾ ಸದಸ್ಯರು ಶೀಘ್ರ ಕರ್ತವ್ಯಕ್ಕೆ ಮರಳುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ತಿಳಿಸಿದೆ.

ಇನ್ನು ಇರಾನ್ ಸುಪ್ರೀಂ ನಾಯಕ ಖಮೇನಿ ನಿಧನದ ಬಳಿಕ ಗಾರ್ಡಿಯನ್ ಕೌನ್ಸಿಲ್‌ನ ಪ್ರಭಾವಿ ಧರ್ಮಗುರು ಅಲಿರೆಝಾ ಅರಾಫಿ ಅವರನ್ನು ತಾತ್ಕಾಲಿಕ ನಾಯಕತ್ವ ಮಂಡಳಿಗೆ ನೇಮಿಸಲಾಗಿದೆ. ತಜ್ಞರ ಸಭೆ ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ, ಸರ್ವೋಚ್ಚ ನಾಯಕನ ಸಂವಿಧಾನಾತ್ಮಕ ಕರ್ತವ್ಯಗಳನ್ನು ಈ ಮೂವರು ಸದಸ್ಯರ ಮಂಡಳಿ ನಿರ್ವಹಿಸಲಿದೆ. ಇದರ ಜೊತೆಗೆ ಇಸ್ಲಾಮಿಕ್ ರೆವುಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ ಹೊಸ ಮುಖ್ಯ ಕಮಾಂಡರ್ ಆಗಿ ಅನುಭವಿ ಮಿಲಿಟರಿ ಅಧಿಕಾರಿ, ಮಾಜಿ ರಕ್ಷಣಾ ಸಚಿವ ಮತ್ತು ಆಂತರಿಕ ಸಚಿವರಾಗಿರುವ ಬ್ರಿಗೇಡಿಯರ್ ಜನರಲ್ ಅಹ್ಮದ್ ವಹಿದಿಯನ್ನು ನೇಮಿಸಲಾಗಿದೆ. ಈ ನಡುವೆ ಒಂದು ಅಥವಾ ಎರಡು ದಿನಗಳಲ್ಲಿ ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡಲಾಗುವುದು ಎಂದು ಇರಾನ್ ವಿದೇಶಾಂಗ ಸಚಿವರು ಹೇಳಿದ್ದಾರೆ.

ಒಟ್ಟಾರೆ ಸೇಡಿನ ಜ್ವಾಲೆಯಲ್ಲಿ ಕುದಿಯುತ್ತಿರುವ ಇರಾನ್ ಪ್ರತಿಕಾರಕ್ಕೆ ಹಂಬಲಿಸುತ್ತಿದೆ. ಶೀಘ್ರದಲ್ಲಿ ದೊಡ್ಡ ದಾಳಿಗೆ ಪ್ಲ್ಯಾನ್ ನಡೆಸಿದ್ದು ತನ್ನ ಸುಪ್ರೀಂ ನಾಯಕನ ಕೊಂದ ಅಮೆರಿಕ, ಇಸ್ರೇಲ್‌ಗೆ ಮುಟ್ಟಿ ನೋಡಿಕೊಳ್ಳುವಂತ ತಿರುಗೇಟು ಕೊಡುವ ತಯಾರಿಯಲ್ಲಿದೆ.

Leave a Comment