ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರೀ ಮೇಘ ಸ್ಫೋಟದ ಪರಿಣಾಮದಿಂದಾಗಿ ಪ್ರವಾಹ ಉಂಟಾಗಿ ರಸ್ತೆಯಲ್ಲಿ ನಿಲುಗಡೆ ಮಾಡಿದ್ದ ಹಲವಾರು ವಾಹನಗಳು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಜಮ್ಮು -ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಹಿಮಾಚಲ ಪ್ರದೇಶದ ಧರ್ಮಶಾಲಾದ ಮೆಕ್ಲೋಡೆಗಂಜ್ ಬಳಿಯಿರುವ ಭಗ್ಸು ನಾಗ್ ನಲ್ಲಿ ದಿಢೀರನೇ ಪ್ರವಾಹ ಕಾಣಿಸಿಕೊಂಡಿದೆ. ಪ್ರವಾಹಕ್ಕೆ ವಾಹನಗಳು ಕೊಚ್ಚಿ ಹೋಗುತ್ತಿರುವ ದೃಶ್ಯ ಭಯವನ್ನು ಹುಟ್ಟಿಸುತ್ತಿದೆ. ಧರ್ಮಶಾಲಾ ಪ್ರದೇಶದಲ್ಲಿ ಸುಮಾರು 119 ಮಿ.ಮೀ. ಅತ್ಯಧಿಕ ಮಳೆಯಾಗುವ ಮೂಲಕ ದಾಖಲೆ ಸೃಷ್ಟಿಸಿದ್ದು,ಇದು ಮುಂಗಾರು ಮಳೆ ಆರಂಭವಾದ ನಂತರ ಸುರಿದ ಅತೀ ಹೆಚ್ಚಿನ ಮಳೆಯಾಗಿದೆ ಎಂದು ವರದಿ ತಿಳಿಸಿದೆ.ಮಳೆ ಭಾರೀ
ಅವಾಂತರವನ್ನೇ ಸೃಷ್ಟಿಸಿದ್ದು ಹಲವು ಮನೆಗಳು ಜಖಂ ಆಗಿವೆ.ಕಾಂಗ್ರಾದಲ್ಲಿ ಪ್ರವಾಹಕ್ಕೆ ಓರ್ವ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾನೆ.ಎಲ್ಲಾ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಮಾತನಾಡಿದ್ದು, ಅಗತ್ಯ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯಾಚರಣೆಗೆ ಕೇಂದ್ರ ಎನ್‌ಡಿಆರ್‌ಎಫ್ ತಂಡಗಳನ್ನು ಹಿಮಾಚಲ ಪ್ರದೇಶಕ್ಕೆ ಕಳುಹಿಸಿಕೊಟ್ಟಿದೆ.















