ರಾಜ್ಯವನ್ನೇ ತಲ್ಲಣಗೊಳಿಸಿದ್ದ ಮಂಗಗಳ ಮಾರಣಹೋಮ ಪ್ರಕರಣವನ್ನು ಭೇದಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಗಳನ್ನು ಹಿಡಿದಿದ್ದ ರಾಮು-ಯಶೋಧ ದಂಪತಿ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.
ಉಗನೆ ಗ್ರಾಮದ ಜಮೀನಿನ ಮಾಲೀಕ ಪ್ರಸನ್ನ ಹಾಗೂ ರುದ್ರೇಗೌಡ ಕೋತಿಗಳ ಸೆರೆಗೆ 40 ಸಾವಿರಕ್ಕೆ ಬಾಣಾವರದ ಕೋತಿ ಸೆರೆ ತಂಡಕ್ಕೆ ಕೋತಿ ಹಿಡಿಯುವಂತೆ ಗುತ್ತಿಗೆ ನೀಡಿದ್ದರು. ಅದರಂತೆ ದಂಪತಿ ಒಂದು ವಾರ ಕೋತಿಗಳಿಗೆ ಬ್ರೆಡ್, ಬಿಸ್ಕೆಟ್ ಹಾಕಿ ಪಳಗಿಸಿದರು. ಕೊನೆಗೆ ಜು.28ರಂದು 50 ಕ್ಕೂ ಹೆಚ್ಚು ಕೋತಿಗಳನ್ನು ಸೆರೆ ಹಿಡಿದಿದ್ದರು. ಅವುಗಳನ್ನು ಗೋಣಿ
ಚೀಲಗಳಲ್ಲಿ ಹಾಕಿ ವಾಹನದಲ್ಲಿ ಸಾಗಿಸುತ್ತಿದ್ದಾಗ, ಉಸಿರುಗಟ್ಟಿ ಮೃತಪಟ್ಟಿವೆ ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಬಳಿಕ ಮೃತಪಟ್ಟಿದ್ದ ಕೋತಿಗಳನ್ನು ಬೇಲೂರು ತಾಲ್ಲೂಕಿನ ಚೌಡನಹಳ್ಳಿ ಎಂಬಲ್ಲಿ ಬಿಸಾಡಿ ಹೋಗಿದ್ದ ಆರೋಪಿಗಳಿಗೆ, ಮರುದಿನ ಕೋತಿಗಳ ಸಾವಿನ ಸುದ್ದಿ ತಿಳಿದಿದೆ. ಹೀಗಾಗಿ ಆಂಜನೇಯ ದೇಗುಲದಲ್ಲಿ ಹೋಮ ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ ಎಂಬುವುದು ತನಿಖೆ ವೇಳೆ ತಿಳಿದು ಬಂದಿದೆ.















