ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸೋಮವಾರ ಸಂಜೆ ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಿಂದ ಕೈಕಂಬದವರೆಗೆ ಸಾವಿರಾರು ಕಾರ್ಯಕರ್ತರ ಜೊತೆಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.
ಪ್ರಚಾರದ ಕೊನೆಯ ದಿನವಾದ ಇಂದು ಬಿಸಿರೋಡಿನಿಂದ ಕೈಕಂಬದವರೆಗೆ ರೋಡ್ ಶೋ ನಡೆಸಿದ ಬಳಿಕ ಕೈಕಂಬದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ನಡೆಯುವ ಭ್ರಷ್ಟಾಚಾರ ನಿಲ್ಲಿಸಲು ಒಟ್ಟಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸಿ,ನಾನು ನಿಮ್ಮ ಜೊತೆ ನಿಲ್ಲುತ್ತೇನೆ , ನನಗೆ ಯಾವುದೇ ಆಸೆಯಿಲ್ಲ, ಆದರೆ ನನಗೆ ಕೊನೆಯ ಚುನಾವಣೆ, ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ ಎಂದು ಅವರು ಭಾವನಾತ್ಮಕವಾಗಿ ಮನವಿ ಮಾಡಿದರು. ಈ ಬಾರಿಯ ವಿಧಾನಸಭಾ ಚುನಾವಣೆ ವಿಶಿಷ್ಟ ಚುನಾವಣೆಯಾಗಿದ್ದು, ಬಂಟ್ವಾಳ ಕ್ಷೇತ್ರದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿಲ್ಲಿ ಸರ್ವರೀತಿಯ ಅಭಿವೃದ್ಧಿಗೆ ಕ್ಷೇತ್ರದ ಜನತೆ ಸಹಕಾರ ನೀಡಿದ ಋಣವನ್ನು ತೀರಿಸಲು ಅಸಾಧ್ಯ. ಕ್ಷೇತ್ರದ ಜನತೆಗೆ ಯಾವುದೇ ಅಗೌರವ ತೋರುವ ಕೆಲಸ ಮಾಡಿಲ್ಲ.ಈ ಬಾರಿ ಕೊನೆಯ ಅವಕಾಶ ನೀಡಿದರೆ ಈ ಹಿಂದಿಗಿಂತ ಹೆಚ್ಚಿನ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಅವರು ತಿಳಿಸಿದರು.
ಬಂಟ್ವಾಳ ಪಿ.ಎಲ್.ಡಿ.ಬ್ಯಾಂಕ್ ನ ಮೂಲಕ ರಾಜಕೀಯ ಪ್ರವೇಶ ಮಾಡಿದ ಬಳಿಕ ನಿರಂತರವಾಗಿ ಕಳೆದ ಹಲವು ವರ್ಷಗಳಿಂದ ಜನ ಸೇವೆ ಮಾಡುತ್ತಾ ಬಂದಿದ್ದೇನೆ.
ಎಲ್ಲಾ ಜಾತಿ, ಮತ,ಭಾಷೆಯನ್ನು ಪ್ರೀತಿ ಮಾಡುವ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಜೀವನ ಪ್ರಾರಂಭ ಮಾಡಿದ್ದೇನೆ.
30 ವರ್ಷ ಶಾಸಕನಾಗಿ,13. ವರ್ಷಗಳ ಕಾಲ ಸಚಿವನಾಗಿ ನಿಮ್ಮ ಸಹೋದರನ ರೀತಿಯಲ್ಲಿ ಜನಸೇವೆ ಮಾಡಲು ಅವಕಾಶ ನೀಡಿದ್ದೀರಿ,ಇದನ್ನು ಜನ್ಮಜನ್ಮಾಂತರಗಳಿಂದ ತೀರಸಲು ಅಸಾಧ್ಯ ಎಂದು ಅವರು ತಿಳಿಸಿದರು.
ನಿಮ್ಮ ಪ್ರೀತಿ ವಿಶ್ವಾಸಕ್ಕೆ ಸದಾ ಚಿರ ಋಣಿ, ನಾನು ಸಮಾನ ರೀತಿಯಲ್ಲಿ ರಾಜಕೀಯ ಮಾಡಿದ್ದು, ಬಂಟ್ವಾಳ ತಾಲೂಕಿನ ಸಮಗ್ರ ಅಭಿವೃದ್ಧಿ ಗಾಗಿ ನಿರಂತರವಾಗಿ
ಕೆಲಸ ಮಾಡುತ್ತಾ ಬಂದಿದ್ದೇನೆ.
ಅನೇಕ ವರ್ಷಗಳಲ್ಲಿ ನಡೆಯದ ಕೆಲಸವನ್ನು ನಾನು ಮಾಡಿದ್ದೇನೆ. ಅಭಿವೃದ್ಧಿಯನ್ನು ಮಾಡಿದ ನನಗೆ ನಿರಂತರವಾಗಿ ಮಾಡಿದ ಅಪಪ್ರಚಾರದಿಂದ ಸೋಲಾಯಿತು. ಸೋಲಿನ ಬಗ್ಗೆ ಬೇಜಾರಿಲ್ಲ,ಸೋಲಿಸಿದ ರೀತಿ ಬೇಜಾರಾಗಿದೆ.
ಈ ಬಾರಿ ನೀವು ಅಶ್ರೀರ್ವಾದ ಮಾಡುತ್ತಿರಿ ಎಂಬ ನಿಟ್ಟಿನಲ್ಲಿ ಚುನಾವಣೆಗೆ ನಿಂತಿದ್ದೇನೆ.ನೀವು ಮತ ನೀಡಿ ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಬಾಕಿಯಾಗಿರುವ ಕನಸಿನ ಯೋಜನೆಗಳನ್ನು ಸಾಕಾರ ಮಾಡಲು ಸಾಧ್ಯವಾಗುತ್ತದೆ.
ನೀವು ನನ್ನ ಜೊತೆ ನಿಂತು ಸಹಕಾರ ನೀಡುತ್ತಿರಿ ಎಂಬ ವಿಶ್ವಾಸವಿದೆ. ಕ್ಷೇತ್ರದ ಸರ್ವರು ನನಗೆ ಧೈರ್ಯ ತುಂಬಿದ್ದೀರಿ, ನಾಯಕರಿಲ್ಲದ ರೋಡ್ ಶೋ ಕಾರ್ಯಕ್ರಮದ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಹೇಳಿದರು.
ನನಗೆ ಯಾವುದೇ ವ್ಯಾಪಾರ ಇಲ್ಲ, ನನಗೆ ವ್ಯಾಪಾರಕ್ಕೆ ಅಧಿಕಾರಿಗಳು ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಶಾಸಕ ನಾಗಿರುವುದು ಐಷಾರಾಮಿ ಜೀವನ ಮಾಡಲು ಅಲ್ಲ,ಕ್ಷೇತ್ರದ ಜನರ ಸೇವೆ ಮಾಡಲು ಮಾತ್ರ ಎಂದು ಅವರು ತಿಳಿಸಿದರು.
ನೇತ್ರಾವತಿ ನದಿ ಕಿನಾರೆ ಬದಿಯಲ್ಲಿ ಬಂಟ್ವಾಳ ಅನೇಕ ಗಣ್ಯರ ನಾಡು, ಸತ್ಯ, ನ್ಯಾಯ ಮತ್ತು ಧರ್ಮಕ್ಕೆ ಹೆಸರು ನೀಡಿದ ತಾಲೂಕು ಇದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಯೂಸ್ ಎಲ್.ರೋಡ್ರಿಗಸ್, ಆಶ್ವನಿ ಕುಮಾರ್ ರೈ,ಪ್ರಕಾಶ್ ಶೆಟ್ಟಿ ತುಂಬೆ,ಬೇಬಿ ಕುಂದರ್,ಸುದೀಪ್ ಶೆಟ್ಟಿ, ಪದ್ಮಶೇಖರ್ ಜೈನ್, ಜಯಂತಿ ಎಸ್ ಪೂಜಾರಿ,ಮಲ್ಲಿಕಾ ಶೆಟ್ಟಿ , ಬಾಲಕೃಷ್ಣ ಶೆಟ್ಟಿ, ಅಬ್ಬಾಸ್ ಆಲಿ, ನವಾಜ್ , ಮಹಮ್ಮದ್ ಶರೀಫ್ ,ಪ್ಲೋಸಿ ಡಿ.ಸೋಜ, ಐಡಾಸುರೇಶ್, ಬಿ.ಎಚ್.ಖಾದರ್, ಸದಾಶಿವ ಬಂಗೇರ, ಮತ್ತಿತರ ಪ್ರಮುಖರು ಹಾಜರಿದ್ದರು.
ರಮಾನಾಥ ರೈ ಅವರ ಪುತ್ರಿ ಚರಿಷ್ಮಾ ರೈ ಅವರು ರೋಡ್ ಶೋ ಕಾರ್ಯಕ್ರಮದ ವಾಹನದಲ್ಲಿ ತಂದೆಯ ಜೊತೆಯಾಗಿದ್ದರು.















