ಬಂಟ್ವಾಳ: ವಿಕಸಿತ ಭಾರತ ಜಿ ರಾಮ್ ಜಿ ಯೋಜನೆಯಿಂದ ಗ್ರಾಮ ಪಂಚಾಯಿತಿ ಅಧಿಕಾರ ಮತ್ತಷ್ಟು ಬಲಗೊಳ್ಳುತ್ತದೆ, ಕಾಂಗ್ರೆಸ್ ಪಕ್ಷ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು,ದೇಶದಲ್ಲಿ ಕಳೆದ 20 ವರ್ಷಗಳ ಹಿಂದೆ ಅನುಷ್ಠಾನಗೊಂಡ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಪರಿವರ್ತನೆಗೊಳಿಸಿರುವ ವಿಕಸಿತ ಭಾರತ ಜಿ. ರಾಮ್ ಜಿ. ಯೋಜನೆ ಬಗ್ಗೆ ಕಾಂಗ್ರೆಸ್ ಅನಗತ್ಯ ಅಪಪ್ರಚಾರದಲ್ಲಿ ತೊಡಗಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಆರೋಪಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಈ ಯೋಜನೆಯಡಿ 4 ಲಕ್ಷಕ್ಕೂ ಮಿಕ್ಕಿ ನಕಲಿ ಕಾಡರ್ು ಕಂಡು ಬಂದ ಹಿನ್ನೆಲೆಯಲ್ಲಿ ಅಂದಿನ ಕೇಂದ್ರ ಸಚಿವ ಶರದ್ ಪವಾರ್ ಕೂಡಾ ಪರಿಷ್ಕರಣೆಗೆ ಸಲಹೆ ನೀಡಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅದನ್ನು ಅನುಷ್ಠಾನಗೊಳಿಸಿದ್ದಾರೆ. ಇದರಿಂದಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದರ ಜೊತೆಗೆ ಗ್ರಾಮ ಪಂಚಾಯಿತಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ' ಎಂದರು.
ಕೂಲಿಗೆ ದಿನವೊಂದಕ್ಕೆ ರೂ 174 ಕ್ಕೆ ಬದಲಾಗಿ ರೂ 375 ಕ್ಕೆ ಏರಿಕೆಗೊಳಿಸಲಾಗಿದ್ದು, ಈ ಹಿಂದಿನಂತೆಯೇ ಗ್ರಾಮ ಪಂಚಾಯಿತಿ ಯೋಜನೆ ಅನುಷ್ಠಾನಗೊಳಿಸುವ ಅಧಿಕಾರ ಹೊಂದಿದೆ. ಈ ಹಿಂದೆ ಅರ್ಹ ಫಲಾನುಭವಿಗಳಿಗೆ ಕಾಮಗಾರಿ ಪೂರ್ಣಗೊಂಡರೂ ಕೂಲಿ ಪಾವತಿಯಾಗುತ್ತಿರಲಿಲ್ಲ. ಆದರೆ ಇದೀಗ ಒಂದು ವಾರದೊಳಗೆ ಕೂಲಿ
ಪಾವತಿಯಾಗಲಿದೆ ಎಂದು ಅವರು ಹೇಳಿದರು. ವಿಬಿ ಜಿ.ರಾಮ್ ಜಿ. ಹೆಸರಿನಲ್ಲಿ ರಾಮನ ಹೆಸರು ಇರುವುದು ಕಾಂಗ್ರೆಸ್ಸಿಗರಿಗೆ ಸಹಿಸಲು ಅಸಾಧ್ಯವಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಮುಖಂಡ ವಿಕಾಸ ಪುತ್ತೂರು ಮಾತನಾಡಿ, 'ದೇಶದಲ್ಲಿ ಈಗಲೂ ಮಹಾತ್ಮಾ ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಿನಲ್ಲಿ 20ಕ್ಕೂ ಹೆಚ್ಚು ಸಂಸ್ಥೆ, ಪ್ರಶಸ್ತಿಗಳಲ್ಲಿ ಅವರ ಹೆಸರು ಇದೆ' ಕಾಂಗ್ರೆಸ್ ಗೆ ಗಾಂಧೀಜಿ, ಅಂಬೇಡ್ಕರ್ ಹೆಸರು ಹೇಳುವ ಯೋಗ್ಯತೆ ಇಲ್ಲ, ಅರಾಜಕತೆ ಮೂಡಿಸುವ ಸಲುವಾಗಿ ಈ ರೀತಿ ಮಾಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಪ್ರಮುಖರಾದ ರಾಜೇಶ್ ರೈ ಕಡೆಂಜಿ, ಶಿವಪ್ರಸಾದ್ ಶೆಟ್ಟಿ, ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.















