ಬಂಟ್ವಾಳಕ್ಕೆ ಸೈಬರ್ ಪೊಲೀಸ್ ಠಾಣೆ ಸ್ಥಳಾಂತರ: ಶೀಘ್ರ ಕಾರ್ಯಾರಂಭ

Coastal Bulletin
ಬಂಟ್ವಾಳಕ್ಕೆ ಸೈಬರ್ ಪೊಲೀಸ್ ಠಾಣೆ ಸ್ಥಳಾಂತರ: ಶೀಘ್ರ ಕಾರ್ಯಾರಂಭ

ಬಂಟ್ವಾಳ: ಸೈಬರ್ ಅಪರಾಧ ಪ್ರಕರಣಗಳ ತನಿಖೆ ಹಾಗೂ ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿರುವ ಗ್ರಾಮಾಂತರ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಬಂಟ್ವಾಳಕ್ಕೆ ಸ್ಥಳಾಂತರಿಸುವ ಸಿದ್ಧತೆ ನಡೆಯುತ್ತಿದೆ. ಠಾಣೆಗಾಗಿ ನವೀಕರಿಸಿರುವ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಸಿಬ್ಬಂದಿ ಹಾಗೂ ಅಗತ್ಯ ಪರಿಕರಗಳ ಸ್ಥಳಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಪ್ರಸ್ತುತ ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಪ್ರತ್ಯೇಕ ಸೈಬರ್ ಪೊಲೀಸ್ ಠಾಣೆಗಳಿದ್ದರೂ, ಎರಡೂ ಠಾಣೆಗಳು ಮಂಗಳೂರಿನಿಂದಲೇ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಸುಳ್ಯ ಸೇರಿದಂತೆ ಜಿಲ್ಲೆಯ ದೂರದ ಗ್ರಾಮಾಂತರ ಭಾಗಗಳ ಜನರು ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದ ದೂರು ಹಾಗೂ ತನಿಖಾ ಕಾರ್ಯಗಳಿಗಾಗಿ ಮಂಗಳೂರಿಗೆ ತೆರಳಬೇಕಾಗಿತ್ತು. ಇದೀಗ ಗ್ರಾಮಾಂತರ ಸೈಬರ್ ಠಾಣೆ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳುತ್ತಿರುವುದರಿಂದ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ.

ಬಿ.ಸಿ.ರೋಡ್‌ನ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಬ್ರಿಟಿಷರ ಕಾಲದ ಹಳೆಯ ಜೈಲು ಕಟ್ಟಡವೇ ಇದೀಗ ಸೈಬರ್ ಪೊಲೀಸ್ ಠಾಣೆಯಾಗಿ ಹೊಸ ರೂಪ ಪಡೆದುಕೊಂಡಿದೆ. ಮಂಗಳೂರು ನಿರ್ಮಿತಿ ಕೇಂದ್ರದ ಮೂಲಕ

ಸುಮಾರು ₹35 ಲಕ್ಷ ವೆಚ್ಚದಲ್ಲಿ ಕಟ್ಟಡವನ್ನು ನವೀಕರಿಸಲಾಗಿದೆ.

ಹಳೆಯ ಹಂಚಿನ ಮೇಲ್ಛಾವಣಿಯ ಕಟ್ಟಡದ ಐತಿಹಾಸಿಕ ಸ್ವರೂಪವನ್ನು ಉಳಿಸಿಕೊಂಡೇ ದುರಸ್ತಿ ಕಾರ್ಯ ನಡೆಸಲಾಗಿದೆ. ಮೇಲ್ಛಾವಣಿ ಸೇರಿದಂತೆ ಕಟ್ಟಡದ ವಿವಿಧ ಭಾಗಗಳನ್ನು ನವೀಕರಿಸಲಾಗಿದ್ದು, ಜೈಲಿನ ಕೊಠಡಿಗಳಲ್ಲಿದ್ದ ಕಬ್ಬಿಣದ ಕಂಬಿಗಳನ್ನು ತೆರವುಗೊಳಿಸಿ ಕಚೇರಿ ವ್ಯವಸ್ಥೆಗೆ ಅನುಗುಣವಾಗಿ ರೂಪಿಸಲಾಗಿದೆ.

ನೂತನ ಠಾಣೆಯಲ್ಲಿ ಡಿವೈಎಸ್ಪಿ, ಇನ್ಸ್‌ಪೆಕ್ಟರ್, ಪಿಎಸ್ಐ ಹಾಗೂ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ದೂರು ಮತ್ತು ಅಹವಾಲು ಸ್ವೀಕಾರಕ್ಕೆ ಪ್ರತ್ಯೇಕ ಕೊಠಡಿಯನ್ನೂ ನಿರ್ಮಿಸಲಾಗಿದ್ದು, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಠಾಣೆ ಕಾರ್ಯಾರಂಭಗೊಂಡ ಬಳಿಕ ಸೈಬರ್ ಅಪರಾಧ ಪ್ರಕರಣಗಳ ತನಿಖೆ ಹಾಗೂ ದೂರುಗಳ ವಿಲೇವಾರಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ.

Leave a Comment