ಬಂಟ್ವಾಳ: ಸರಕಾರದ ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲೆಗಳ ಬಿಸಿಯೂಟ ಅಡುಗೆ ಸಿಬ್ಬಂದಿಯ ಗೌರವಧನವನ್ನು ಮಾಸಿಕ ₹20 ಸಾವಿರಕ್ಕೆ ಹೆಚ್ಚಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಕ್ರಮ ಕೈಗೊಂಡು ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಆರೋಗ್ಯ ಸಚಿವರನ್ನು ಆಗ್ರಹಿಸಿದ್ದಾರೆ.
ಸರಕಾರ ಜಾಹೀರಾತು, ಪ್ರಚಾರ, ವಿವಿಧ ಯೋಜನೆಗಳ ವೈಭವೀಕರಣ, ಗ್ಯಾರಂಟಿ ಸಮಾವೇಶಗಳು, ಉನ್ನತ ಅಧಿಕಾರಿಗಳ ಪ್ರವಾಸ ಹಾಗೂ ದೈನಂದಿನ ವೆಚ್ಚ, ಸಚಿವರ ದೈನಂದಿನ ಖರ್ಚು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನಗತ್ಯವಾಗಿ ಹಣ ವ್ಯಯಿಸುತ್ತಿದೆ. ಈ ದುಂದು ವೆಚ್ಚದಲ್ಲಿ ವಾರ್ಷಿಕ ಶೇ. ಒಂದರಷ್ಟು ಕಡಿತಗೊಳಿಸಿದರೂ ಸುಮಾರು ₹700 ಕೋಟಿ ಉಳಿತಾಯ ಮಾಡಲು ಸಾಧ್ಯವಿದೆ. ಈ ಮೊತ್ತವನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲೆಗಳ ಬಿಸಿಯೂಟ ಅಡುಗೆ ಸಿಬ್ಬಂದಿಯ ಗೌರವಧನ ಹೆಚ್ಚಳಕ್ಕೆ ಬಳಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಶಾ ಕಾರ್ಯಕರ್ತೆಯರ ಸೇವೆ ಆರಂಭವಾದ ಬಳಿಕ ಗ್ರಾಮೀಣ ಭಾಗದ ಅದೆಷ್ಟೋ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮನೆ ಬಾಗಿಲಲ್ಲೇ ಆರೋಗ್ಯ ಸೇವೆ ದೊರೆಯುತ್ತಿದೆ. ಗ್ರಾಮದ ಆರೋಗ್ಯ ಸೇವಕಿಯರಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಪ್ರಮುಖ ಕೊಂಡಿಯಾಗಿದ್ದಾರೆ. ಇಂತಹ ಸೇವಾ ಮನೋಭಾವದ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಿಸುವ ಭರವಸೆ ನೀಡಿತ್ತು. ಆದರೆ
ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಈ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಭಾಕರ ಪ್ರಭು ಹೇಳಿದ್ದಾರೆ.
ಆರೋಗ್ಯ ಸಚಿವರ ಹೇಳಿಕೆ ಖಂಡನೀಯ
ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಇಲ್ಲದಿದ್ದರೂ ಇಲಾಖೆ ನಡೆಯುತ್ತದೆ ಎಂಬ ಆರೋಗ್ಯ ಸಚಿವರ ಹೇಳಿಕೆ ಖಂಡನೀಯ. ಈ ಮಾತು ಆಶಾ ಕಾರ್ಯಕರ್ತೆಯರಿಗೆ ಮಾತ್ರವಲ್ಲದೆ ಇಡೀ ಮಹಿಳಾ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಸೇವೆ ಇಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎನ್ನುವುದಾದರೆ, ರಾಜ್ಯದಲ್ಲಿ ಸರಕಾರ ಇಲ್ಲದಿದ್ದರೂ ರಾಷ್ಟ್ರಪತಿ ಆಡಳಿತದಡಿ ಆಡಳಿತ ಯಂತ್ರ ತನ್ನ ಕೆಲಸ ನಿರ್ವಹಿಸುತ್ತದೆ. ಈ ಹಿಂದೆಯೂ ಅಂತಹ ವ್ಯವಸ್ಥೆಯಲ್ಲಿ ಆಡಳಿತ ನಡೆದಿದೆ. ಹಾಗೆಂದು ಜನಪ್ರತಿನಿಧಿಗಳ ಹಾಗೂ ಸರಕಾರದ ಜವಾಬ್ದಾರಿಯನ್ನು ಕಡೆಗಣಿಸಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಪ್ರಭಾಕರ ಪ್ರಭು, ಆಶಾ ಕಾರ್ಯಕರ್ತೆಯರ ಸೇವೆಯ ಮಹತ್ವವನ್ನು ಸರಕಾರ ಅರಿತು ಅವರ ಗೌರವಧನ ಹೆಚ್ಚಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.










