ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಧರ್ಮಸ್ಥಳ, ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗ, ಮಂಗಳೂರು ಉಪವಿಭಾಗ ಬಂಟ್ವಾಳ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ನೆಲ ಜಲ ಪ್ರಾಣಿ ಸಂಕುಲ ವನ ಸಂರಕ್ಷಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯಾದ್ಯಂತ ಹಮ್ಮಿಕೊಂಡಿರುವ ದಶಲಕ್ಷ ಗಿಡ ನಾಟಿ ಕಾರ್ಯಕ್ರಮ ಜು 2ರಂದು ಮಂಗಳವಾರ ಬಂಟ್ವಾಳ ತಾಲೂಕಿನ ಕಾವಲಪಡೂರು ಗ್ರಾಮದ ಅಲಂಪುರಿ ಸಾಲುಮರ ತಿಮ್ಮಕ್ಕ ವೃಕ್ಷ ಉದ್ಯಾನ ವನದಲ್ಲಿ ನೆರೆವೇರಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಡೆ ವಹಿಸಲಿದ್ದು, ಕರ್ನಾಟಕ ಸರಕಾರದ ಅರಣ್ಯ, ಜೀವಶಾಸ್ತ್ರ,ಪರಿಸರ ಸಚಿವರಾದ ಈಶ್ವರ ಖಂಡ್ರೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಿದ್ದಾರೆ. ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸಸಿ ವಿತರಣೆಯನ್ನು ಮಾಡಲಿದ್ದಾರೆ. ಪುತ್ತೂರು ತಾಲೂಕಿನ ಅವಿನಾಶ್ ಕೊಡಂಕಿರಿ ರವರಿಗೆ "ಅರಣ್ಯ ಮಿತ್ರ ಪ್ರಶಸ್ತಿ" ಪ್ರದಾನವನ್ನು ಮಾಜಿ ಸಚಿವರಾದ ರಮಾನಾಥ ರೈ ನೆರೆವೇರಿಸಳಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶೌರ್ಯ ಕರಪತ್ರ ಬಿಡುಗಡೆ ಮಾಡಲಿರುವರು.
ಕಾರ್ಯಕ್ರಮದಲ್ಲಿ ಮಂಗಳೂರು ವೃತ್ತ ಸಿ ಎಫ್ ಡಾ.ವಿ. ಕರಿಕಾಲನ್, ಮಂಗಳೂರು ವಿಭಾಗ ಡಿ ಸಿ ಎಫ್ ಅಂಟೋನಿ ಮರಿಯಪ್ಪ ವೈ.ಕೆ., ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ , ಕಾವಲಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮಿನಾರಾಯಣ ಶರ್ಮ, ಬಂಟ್ವಾಳ ವಲಯ ಅರಣ್ಯ ಅಧಿಕಾರಿ ಪ್ರಪುಲ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ಅನಿಲ್ ಕುಮಾರ್
ಎಸ್ ಎಸ್ ಮೊದಲಾದವರು ಉಪಸ್ಥಿತಿಯಲ್ಲಿರುವವರು ಎಂದು ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿಯಿಂದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಬ್ಬಲಸು, ಮಾವು, ಪುನರ್ಪುಳಿ, ನೆಲ್ಲಿ, ಜಾರಿಗೆ, ಅರ್ತಿಹಣ್ಣು, ನೇರಳೆ, ಹುಣಸಿ, ಗೇರು, ಬಿದಿರು, ಮುಂತಾದ ಹಣ್ಣಿನ ಗಿಡಗಳನ್ನು ಕಾಡಿನ ಪ್ರದೇಶಗಳಲ್ಲಿ ನೆಡಲಾಗುತ್ತಿದೆ. ಮುಂದಿನ 8-10 ವರ್ಷಗಳಲ್ಲಿ ಇವುಗಳು ಸಮೃದ್ಧ ಫಲಗಳನ್ನು ವನ್ಯ ಪ್ರಾಣಿಗಳಿಗೆ ನೀಡಲಿವೆ. ಅರಣ್ಯ ಪ್ರದೇಶಗಳಲ್ಲಿಯೇ ಸಮೃದ್ಧ ಆಹಾರ ವನ್ಯಪ್ರಾಣಿಗಳಿಗೆ ಸಿಗಬೇಕೆನ್ನುವ ಶ್ರೇಷ್ಠ ಚಿಂತನೆಯಿಂದ ಈ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ 6,069 ಕಾರ್ಯಕ್ರಮಗಳನ್ನು ಹಮ್ಮಿಕೊಂಡು 3,70,000 ಕ್ಕೂ ಅಧಿಕ ಹಣ್ಣಿನ ಮರಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.
ಈ ಬಾರಿಯ ಯೋಜನೆಯ ದಶಲಕ್ಷ ಗಿಡ ನಾಟಿ ಕಾರ್ಯಕ್ರಮದ ಪ್ರಯುಕ್ತ ರಾಜ್ಯದಲ್ಲಿ ಸುಮಾರು 10,000 ಎಕರೆ ಭೂ ಪ್ರದೇಶದಲ್ಲಿ 10ಲಕ್ಷಕ್ಕೂ ಅಧಿಕ ಹಣ್ಣಿನ ಹಾಗೂ ಇತರ ಗಿಡ ನಾಟಿ ಕಾರ್ಯಕ್ರಮವನ್ನು ಸುಮಾರು ರೂ.1ಕೋಟಿ ಅನುದಾನದೊಂದಿಗೆ ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುತಿದೆ.









