ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿರುವುದು ಖಂಡನೀಯ ಎಂದು ಬಂಟ್ವಾಳ ಬಿಜೆಪಿ ಯುವ ಮೋರ್ಚಾದ ಹಂಗಾಮಿ ಅಧ್ಯಕ್ಷ ಕಿಶೋರ್ ಪಲ್ಲಿಪಾಡಿ ಹೇಳಿಕೆ ನೀಡಿದ್ದಾರೆ.
ಕಳೆದ ಜುಲೈ 26ರಂದು ರಾತ್ರಿ ಪ್ರವೀಣ್ ನೆಟ್ಟಾರು ಅವರ ಹತ್ಯೆಯಾಗಿತ್ತು. ಈ ಹಿಂದೆ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಅವರಿಗೆ ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿ ವಿಶೇಷಾಧಿಕಾರ ಬಳಸಿ ಕೆಲಸ ಕೊಡಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭರವಸೆ ನೀಡಿದ್ದರು. ಅದರಂತೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವಾಲಯದಲ್ಲಿ ಹಿರಿಯ ಸಹಾಯಕಿ (ಗ್ರೂಪ್ ಸಿ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ 2022ರ ಸೆಪ್ಟೆಂಬರ್ 22ರಂದು ಆದೇಶ ಹೊರಡಿಸಲಾಗಿತ್ತು.
ನೂತನ ಅವರ ವಿನಂತಿ ಮೇರೆಗೆ
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಕೆಲಸ ನೀಡಲಾಗಿತ್ತು. ಕಳೆದ ಅಕ್ಟೋಬರ್ 14ರಂದು ಅವರು ಕರ್ತವ್ಯಕ್ಕೆ ಹಾಜರಾಗಿದ್ದರು.
ಪ್ರಸಕ್ತ ಮುಖ್ಯಮಂತ್ರಿ ಇರುವ ತನಕ ಇಲ್ಲವೇ ಮುಂದಿನ ಆದೇಶದವರೆಗೆ ಎಂದು ಅವರ ನೇಮಕಾತಿ ಆದೇಶದಲ್ಲಿ ನಮೂದಿಸಲಾಗಿತ್ತು ಎನ್ನಲಾಗಿದೆ. ಇದೀಗ ಸರಕಾರ ಬದಲಾಗಿದ್ದು, ನೂತನ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ.
ಇದು ನ್ಯಾಯವಲ್ಲ,ವಿಧವೆ ನೂತನ ಅವರ ಜೀವನಕ್ಕೆ ಆಧಾರವಾಗುವ ನಿಟ್ಟಿನಲ್ಲಿ ಮಾನವೀಯತೆಯ ಮೂಲಕ ನೀಡಲಾದ ಕೆಲಸದಿಂದ ವಜಾ ಮಾಡಿದ ಕಾಂಗ್ರೆಸ್ ನ ನಿಲುವನ್ನು ಬಿಜೆಪಿ ಯುವ ಮೋರ್ಚಾ ಬಲವಾಗಿ ಖಂಡಿಸುತ್ತದೆ.ಮತ್ತು ನೂತನ ಅವರಿಗೆ ವಾಪಾಸು ಕೆಲಸವನ್ನು ನೀಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.















