ಬಂಟ್ವಾಳ: ಪ್ರತಿಯೊಂದು ಮಗು ಕೂಡ ಪರಿಸರಕ್ಕೆ ಒಂದು ವಿಜ್ಞಾನಿಯೇ ಆಗಿದ್ದು, ವಿದ್ಯಾರ್ಥಿಗಳು ಪರಿಸರ ಪ್ರೇಮವನ್ನು ಬೆಳೆಸಬೇಕು ಎಂದು ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ ಹೇಳಿದರು.
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ “ಜ್ಞಾನಧಾರ ಸಪ್ತಾಹ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಈ ವಿದ್ಯಾ ಸಂಸ್ಥೆಯಲ್ಲಿ ಭಾರತೀಯ ಸಂಸ್ಕೃತಿ,ಸಂಸ್ಕಾರಕ್ಕೆ ಪೂರಕವಾದ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳು ಭಾಗ್ಯವಂತರು ಎಂದರಲ್ಲದೆ ತಾನು ಸುರಂಗ ಅಗೆದು ನೀರು ಪಡೆದ ಸಾಹಸದ ಕಥೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಮಾತಾಡಿ ಮಹಾಲಿಂಗ ನಾಯ್ಕರ ಸಾಧನೆ ನಿಜಕ್ಕೂ ಒಂದು ಅತ್ಯದ್ಭುತ. ವಿದ್ಯಾರ್ಥಿಗಳಲ್ಲಿರುವ ಕುತೂಹಲಕ್ಕೆ ತಕ್ಕಂತೆ ಸಾಧನೆಯನ್ನು ಮಾಡಿದಾಗ ಸಫಲತೆಯನ್ನು ಕಾಣಲು ಸಾಧ್ಯ ಎಂದರು.
ಇದೇ ವೇಳೆ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕರವರನ್ನು ಗೌರವಿಸಲಾಯಿತು.
5ನೇ ತರಗತಿಯ ವೈಷ್ಣವಿ ಕಡ್ಯ ‘ವಿಜ್ಞಾನ ಮತ್ತು ಭಾರತೀಯ ಸಂಪ್ರದಾಯ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದಳು.
ಕಾರ್ಯಕ್ರಮದಲ್ಲಿ ಹದಿನೈದು ತಳಿಗಳ ೧೦೦ ಬಾಳೆಗೊನೆಗಳ ಪ್ರದರ್ಶನ, ಕಾಡು ಹಣ್ಣುಗಳ ಪ್ರದರ್ಶನ, ಔಷದಿ ಸಸ್ಯಗಳ ಪರಿಚಯದೊಂದಿಗೆ ಸುಮಾರು ೧೦೦ ಜಾತಿಗೆ ಸೇರಿದ ಹೂಗಳು, ಹತ್ತಾರು ದವಸ ಧಾನ್ಯಗಳು ಹಾಗೂ ತರಕಾರಿಗಳು ವಿವಿಧ ಬಗೆಯ ಏಳನೀರುಗಳ ಪ್ರದರ್ಶನ ಮತ್ತು ಮಾಹಿತಿಯನ್ನು ವಿದ್ಯಾರ್ಥಿಗಳು
ನೀಡಿದರು. ಇತರ ಶಾಲಾ ವಿದ್ಯಾರ್ಥಿಗಳು ಪ್ರದರ್ಶನಗಳನ್ನು ವೀಕ್ಷಿಸಿ ಸಂತಸ ಪಟ್ಟರು. ವಿಜ್ಞಾನ ಮೇಳದಲ್ಲಿ ಕಸ್‌ಕಸ್ , ಪುನರ್ಪುಳಿ, ಕರಿಮೆಣಸು , ಮಿಡಿಮಾವು, ದಾಸವಾಳ, ಅನನಾಸು, ಹೀಗೆ ವಿವಿಧ ಬಗೆಯ ಆರ್ಯವೇದ ಪಾನೀಯಗಳನ್ನು ವಿದ್ಯಾರ್ಥಿಗಳೇ ತಯಾರಿಸಿ ವಿತರಿಸಿದರು. ಮಕ್ಕಳಿಂದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು.
ವಿಜ್ಞಾನ ಮೇಳದಲ್ಲಿ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಂಪ್ರಬೈಲು ಶ್ರೀಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಜಯಾನಂದ ಆಚಾರ್ಯ, ವಿಟ್ಲ ಅರಸು ಮನೆತನದ ಶ್ರೀ ಕೃಷ್ಣಯ್ಯ ಕೆ, ಬಿ.ಸಿ.ರೋಡಿನ ನ್ಯಾಯವಾದಿ, ನೋಟರಿ ಜಯರಾಮ ರೈ, ವಿಟ್ಲ ರೋಟರಿ ಘಟಕದ ಅಧ್ಯಕ್ಷರಾದ ಅಣ್ಣಪ್ಪ ಶಾಸ್ತಾನ, ವಿಟ್ಲ ವಿದ್ಯಾಪೋಷಕ ಸಮಿತಿಯ ಅಧ್ಯಕ್ಷರಾದ ಬಾಬು ಕೆ ವಿ, ದಕ್ಷಿಣ ಪ್ರಾಂತ ಮಾತೃಸೇವಿಕಾ ಸಮಿತಿಯ ಕಾರ‍್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್, ಆಡಳಿಮಂಡಳಿಯ ಸದಸ್ಯೆ ಮಲ್ಲಿಕಾ ಶೆಟ್ಟಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ವೇದಾವತಿ ಕೆ ಮಾತಾಜಿ ಸ್ವಾಗತಿಸಿದರು.
ಲಿಖಿತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣ ಮಾತಾಜಿ ವಂದಿಸಿದರು. ಸುಮಂತ್ ಆಳ್ವ , ಸವಿತಾ ಮಾತಾಜಿ ಮತ್ತು ರಮ್ಯ ಮಾತಾಜಿ ಸಹಕರಿಸಿದರು.













