ಫರಂಗಿಪೇಟೆ: ವಿದ್ಯಾರ್ಥಿ ನಾಪತ್ತೆ ಪ್ರಕರಣ : ಸ್ಥಳೀಯರಿಂದ ಪೊಲೀಸ್ ಹೊರ ಠಾಣೆಗೆ ಮುತ್ತಿಗೆ 24 ಗಂಟೆಯ ಒಳಗಾಗಿ ಬಾಲಕನ ಪತ್ತೆಗೆ ಆಗ್ರಹ : ಮಾ.01ಶನಿವಾರ ಫರಂಗಿಪೇಟೆ ಬಂದ್ ಗೆ ಕರೆ.

Coastal Bulletin
ಫರಂಗಿಪೇಟೆ: ವಿದ್ಯಾರ್ಥಿ ನಾಪತ್ತೆ ಪ್ರಕರಣ : ಸ್ಥಳೀಯರಿಂದ ಪೊಲೀಸ್ ಹೊರ ಠಾಣೆಗೆ ಮುತ್ತಿಗೆ 24 ಗಂಟೆಯ ಒಳಗಾಗಿ ಬಾಲಕನ ಪತ್ತೆಗೆ ಆಗ್ರಹ : ಮಾ.01ಶನಿವಾರ ಫರಂಗಿಪೇಟೆ ಬಂದ್ ಗೆ ಕರೆ.

ಬಂಟ್ವಾಳ: ತಾಲೂಕಿನ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಎಂಬವರ ಪುತ್ರ ದಿಗಂತ್ ನಾಪತ್ತೆಯಾಗಿ ದಿನ ಕಳೆದರೂ ಆತನ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಗದಿರುವ ಕಾರಣ ಸ್ಥಳೀಯ ಗ್ರಾಮಸ್ಥರು ಫರಂಗಿಪೇಟೆಯಲ್ಲಿರುವ ಪೊಲೀಸ್ ಹೊರ ಠಾಣೆಗೆ ಫೆ. 27ರಂದು ಗುರುವಾರ ಬೆಳಿಗ್ಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ಸಂದರ್ಭ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ ಪ್ರತಿಭಟನಕಾರರು ಮುಂದಿನ‌ 24 ಗಂಟೆಯ ಒಳಗಾಗಿ ಬಾಲಕನನ್ನು ಪತ್ತೆ ಮಾಡಬೇಕು ತಪ್ಪಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಎಡಿಷನಲ್ ಎಸ್ಪಿ ರಾಜೇಂದ್ರ ಅವರ ಜೊತೆ ಪ್ರತಿಭಟನಕಾರರು ಮಾತುಕತೆ ನಡೆಸಿದರು.


ಬಳಿಕ ಫರಂಗಿಪೇಟೆಯ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ನಡೆಸಿ ಮಾ.1 ರಂದು ಶನಿವಾರ ಬೆಳಗ್ಗಿನಿಂದ ಫರಂಗಿಪೇಟೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಗೊಳಿಸಿ ಪ್ರತಿಭಟನೆ ಮಾಡಲು ತೀರ್ಮಾನಿಸಲಾಯಿತು. ಈ ಪ್ರತಿಭಟನೆ ಯಶಸ್ವಿಯಾಗಲು ಎಲ್ಲಾ ಸಂಘ ಸಂಸ್ಥೆಗಳು, ಸ್ಥಳೀಯ ಆರು ಗ್ರಾಮಗಳ ಗ್ರಾಮಸ್ಥರು, ವ್ಯಾಪಾರಿಗಳು, ಸಹಕಾರ ನೀಡುವಂತೆ ಕೋರಲಾಯಿತು.

ಈ ಸಂದರ್ಭ ಪ್ರಮುಖರಾದ ಉಮೇಶ್ ಶೆಟ್ಟಿ ಬರ್ಕೆ, ಚಂದ್ರಶೇಖರ ಗಾಂಭೀರ, ಭರತ್ ಕುಮ್ಡೇಲು, ಪ್ರಸಾದ್ ಕುಮಾರ್,ಪ್ರವೀಣ್

ಬಿ ತುಂಬೆ, ಪದ್ಮನಾಭ ಶೆಟ್ಟಿ ಕಿದೆಬೆಟ್ಟು, ಧನರಾಜ್ ತೇವು, ವಿಠ್ಠಲ್ ಆಳ್ವ , ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಪ್ರಕರಣದ ಹಿನ್ನೆಲೆ :

ಮಂಗಳೂರಿನ ಕಪಿತಾನಿಯೋ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಅವರ ಪುತ್ರ ದಿಗಂತ್(17) ಫೆ. 25ರಂದು ಸಂಜೆ ಆಂಜನೇಯ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಬಳಿಕ ನಾಪತ್ತೆಯಾಗಿದ್ದ. ಹುಡುಕಾಡಿದಾಗ ಆತನ ಚಪ್ಪಲಿಗಳು ಹಾಗೂ ಮೊಬೈಲ್ ಮನೆ ಸಮೀಪದ ರೈಲ್ವೇ ಹಳಿಯಲ್ಲಿ ಬಿದ್ದು ಕೊಂಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಬಾಲಕನ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿರುವ ಕಾರಣ ಹೊರ ಠಾಣೆಗೆ ಮುತ್ತಿಗೆ ಹಾಕಿರುವುದಾಗಿ ಪ್ರತಿಭಟನಕಾರರು ತಿಳಿಸಿದ್ದಾರೆ.

Leave a Comment