ಬಂಟ್ವಾಳ : ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರಕ್ಕೆ ದೇವಾಡಿಗ ಸಮಾಜದ ನೇತೃತ್ವದಲ್ಲಿ ನಡೆಯಲಿರುವ ರಥ ಸಮರ್ಪಣೆ ಯ ಹಿನ್ನೆಲೆಯಲ್ಲಿ ಸೆ.26 ರಂದು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು.
ನಂದಾವರ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇದ ಮೂರ್ತಿ ಮಹೇಶ್ ಭಟ್ ಅವರು, ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ದೇವಾಡಿಗ ಸಮಾಜಕ್ಕೂ ನಂದಾವರ ಕ್ಷೇತ್ರಕ್ಕೂ ಹಿಂದಿನಿಂದಲೂ ಸಂಬಂಧವಿದೆ, ದೇವರ ಇಚ್ಛೆಯಂತೆ ರಥ ಸಮರ್ಪಣೆ ಮಹತ್ಕಾರ್ಯವೂ ದೇವಾಡಿಗ ಸಮಾಜದ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.
ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ರಾಮದಾಸ್ ಬಂಟ್ವಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕ್ಷೇತ್ರ ನಂದಾವರಕ್ಕೆ ರಥ ಸಮರ್ಪಣೆಯ ನಿಟ್ಟಿನಲ್ಲಿ ದೇವಾಡಿಗ ಸಮಾಜ ನೇತೃತ್ವವನ್ನು
ವಹಿಸಿದ್ದು, ಸಮಸ್ತ ಆಸ್ತಿಕ ಬಂಧುಗಳು ಕೈ ಜೋಡಿಸಬೇಕಿದೆ. ಸೇವಾ ರೂಪದಲ್ಲಿ ನೀಡುವ ರಥಕ್ಕೆ 20 ಲಕ್ಷ ರೂ ವೆಚ್ಚವಾಗಲಿದ್ದು, ರಥದ ಕೆತ್ತನೆ ಕಾರ್ಯವೂ ಆರಂಭಗೊಂಡಿದೆ ಎಂದರು.
ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಉಪಾಧ್ಯಕ್ಷ ರಾಮಪ್ರಸಾದ್ ಪೂಂಜಾ, ಸದಸ್ಯರಾದ ಜಯಶಂಕರ್ ಬಾಸ್ರಿತ್ತಾಯ, ವಿಶ್ವನಾಥ ಆಳ್ವ, ರೂಪೇಶ್ ಆಚಾರ್ಯ, ಅಶೋಕ್, ದೇವಾಡಿಗ ಸಮಾಜ ಶ್ರೀ ನಂದಾವರ ದೇವಸ್ಥಾನ ರಥ ಸಮರ್ಪಣಾ ಸಮಿತಿಯ ಗೌರವಾಧ್ಯಕ್ಷ ಡಾ. ಸುಂದರ ಮೊಯಿಲಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಮೊಯಿಲಿ, ಗೌರವ ಸಲಹೆಗಾರ ಪದ್ಮನಾಭ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.














