ಕಾಂಗ್ರೆಸ್ -ಬಿಜೆಪಿ ನೇರ ಹೋರಾಟ, ಪಕ್ಷೇತರರಿಗಿಲ್ಲ ಮಣೆ. ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗುತ್ತಿದೆ ದ.ಕ.ಲೋಕಸಭಾ ಕ್ಷೇತ್ರ.

Coastal Bulletin
ಕಾಂಗ್ರೆಸ್ -ಬಿಜೆಪಿ ನೇರ ಹೋರಾಟ, ಪಕ್ಷೇತರರಿಗಿಲ್ಲ ಮಣೆ. ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗುತ್ತಿದೆ ದ.ಕ.ಲೋಕಸಭಾ ಕ್ಷೇತ್ರ.

ಮಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಹಬ್ಬ ಮತ್ತೆ ಎದುರಾಗಿದೆ, ಮತ್ತೊಮ್ಮೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ, ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯ ಗೆಲುವಿಗಾಗಿ ರಣತಂತ್ರಗಳನ್ನು ರೂಪಿಸಿದೆ. ಈ ನಡುವೆ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿ ಕಳೆದ ಎರಡು ದಶಕಗಳಿಂದ ಬಿಜೆಪಿಯ ಶಕ್ತಿ ಕೇಂದ್ರವಾಗಿ ರೂಪುಗೊಂಡು ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಬದಲಾವಣೆಯೊಂದಿಗೆ ಎಂಟು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯನ್ನೊಳಗೊಂಡ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕೂಡ ಜಿದ್ದಾಜಿದ್ದಿನ ಹೋರಾಟಕ್ಕೆ ಆಣಿಯಾಗುತ್ತಿದೆ.

ಬೌಗೋಲಿಕವಾಗಿ ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ ಉತ್ತರದಲ್ಲಿ ಉಡುಪಿ ಜಿಲ್ಲೆ ಹಾಗೂ ದಕ್ಷಿಣದಲ್ಲಿ ಕೇರಳ ರಾಜ್ಯಗಳಿಂದ ಸುತ್ತುವರಿದಿರುವ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ನಾಡು ದಕ್ಷಿಣ ಕನ್ನಡ. ಶಿಕ್ಷಣ, ಕಲೆ, ಸಾಹಿತ್ಯ, ಬ್ಯಾಂಕಿಂಗ್ ಮತ್ತು ಉದ್ಯಮ ಕ್ಷೇತ್ರಗಳಿಗೆ ಮಹತ್ತರ ಕೊಡುಗೆ ನೀಡಿರುವ ದಕ್ಷಿಣ ಕನ್ನಡ ತೀವ್ರಗತಿಯಲ್ಲಿ ಅಭಿವೃದ್ಧಿ ಕಾಣುತ್ತಿರುವ ಜಿಲ್ಲೆಗಳ ಪೈಕಿ ಪ್ರಮುಖವಾಗಿ ಗುರುತಿಸಿಕೊಂಡಿದೆ.

ಒಟ್ಟು 4,366 ಚ.ಕೀ.ವಿಸ್ತೀರ್ಣ ಹೊಂದಿರುವ ಈ ಜಿಲ್ಲೆ ದಕ್ಷಿಣ ಕರ್ನಾಟಕದ ಕರಾವಳಿ ಭಾಗದಲ್ಲಿದೆ. 8 ವಿಧಾನಸಭಾ ಕ್ಷೇತ್ರಗಳು,9 ತಾಲೂಕುಗಳು, 422 ಕಂದಾಯ ಗ್ರಾಮಗಳು, 223 ಗ್ರಾಮ ಪಂಚಾಯಿತಿಗಳು,1 ನಗರಪಾಲಿಕೆ, ಪುರಸಭೆಗಳು ಹಾಗೂ 8 ಪಟ್ಟಣ ಪಂಚಾಯಿತಿಗಳನ್ನು ಒಳಗೊಂಡಿರುವ ದ.ಕ. ಜಿಲ್ಲೆ ಸುಮಾರು 24 ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ.

ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಸತತ 9 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 1991ರ ಬಳಿಕದ ಚುನಾವಣೆಯಲ್ಲಿ ಸತತ 8 ಬಾರಿ ಬಿಜೆಪಿ ಜಯಗಳಿಸಿದೆ. ಕಳೆದ 16 ಚುನಾವಣೆಗಳಲ್ಲಿ ಮೊದಲಿಗೆ ಕಾಂಗ್ರೆಸ್ ಮತ್ತು ಅನಂತರ ಬಿಜೆಪಿ ಹೊರತಾಗಿ ಅನ್ಯ ಪಕ್ಷಗಳು ಗೆದ್ದ ಇತಿಹಾಸವಿಲ್ಲ.

 ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಮತ್ತು ಬಿಜೆಪಿಯ ವಿ.ಧನಂಜಯ ಕುಮಾರ್ ಸತತ ನಾಲ್ಕು ಬಾರಿ ಗೆಲುವು ಸಾಧಿಸುವ ಮೂಲಕ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಇವರಿಬ್ಬರು ಸಚಿವರಾಗಿಯೂ ನಿರ್ವಹಿಸಿದ್ದಾರೆ. 

ಈ ಬಾರಿ ಎರಡು ರಾಷ್ಟ್ರೀಯ ಪಕ್ಷಗಳು ಹೊಸ ಮುಖಗಳನ್ನು ದ ಕ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಗೆ ನಿಲ್ಲಿಸಿದೆ, ಕಾಂಗ್ರೆಸ್

ನಿಂದ ನ್ಯಾಯವಾದಿ ಪದ್ಮರಾಜ್ ಅರ್ ಪೂಜಾರಿ ಹಾಗೂ ಬಿಜೆಪಿಯಿಂದ ನಿವೃತ್ತ ಸೇನಾನಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭ್ಯರ್ಥಿಗಳಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ, ಇಬ್ಬರೂ ಆರೋಪರಹಿತರು, ವೃತ್ತಿಪರ ರಾಜಕಾರಣಿಗಳಲ್ಲ.

ಬಿಜೆಪಿಯ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಿವೃತ್ತ ಸೇನಾನಿ.ಅವರು ಪ್ರತಿಷ್ಠಿತ 8 ಗೂರ್ಖಾ ರೈಫಲ್ಸ್ನ 7ನೇ ಬೆಟಾಲಿಯನ್‌ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಬಳಿಕ ಸ್ವಯಂ ನಿವೃತ್ತಿಯ ನಂತರ 2011ರಲ್ಲಿ ತನ್ನ ಸ್ವಗ್ರಾಮಕ್ಕೆ ಹಿಂದಿರುಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಯೊಂದಿಗೆ ಸೇರಿಕೊಂಡರು.ಮಂಗಳೂರು ಕಂಬಳ ಸಂಘಟಕ, ಸಾಮಾಜಿಕ ಧಾರ್ಮಿಕ ಸೇವೆಯಲ್ಲಿ ತನ್ನನು ತೊಡಗಿಸಿಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ವೃತ್ತಿಯಲ್ಲಿ ನ್ಯಾಯವಾದಿ,25 ವರ್ಷಗಳಿಂದ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರು . ಜೆಪಿ ನಾರಾಯಣ ಸ್ವಾಮಿ ಪ್ರತಿಷ್ಠಾಪನ ಬೆಂಗಳೂರು ಇದರ ದ.ಕ. ಜಿಲ್ಲಾ ಸಂಚಾಲಕರಾಗಿ ,ಗುರುಬೆಳದಿಂಗಳು ಫೌಂಡೇಶನ್ ಮೂಲಕ ಸಾಮಾಜಿಕ ಧಾರ್ಮಿಕ ಸೇವೆಯನ್ನು ಸಲ್ಲಿಸಿದವರು.

ಒಟ್ಟಿನಲ್ಲಿ ಬೇಸಿಗೆಯ ಸುಡು ಬಿಸಿಲಿನ ತಾಪದಂತೆ ಚುನಾವಣಾ ಕಾವು ಕೂಡ ಏರುತ್ತಿದೆ, ಎರಡು ಪಕ್ಷಗಳ ಕಾರ್ಯಕರ್ತರು ಊರು ಕೇರಿ ಸುತ್ತಿ ಮತ ಯಾಚನೆ ನಡೆಸಿದೆ, ಮತದಾರ ಯಾರಿಗೆ ಮಣೆ ಹಾಕುತ್ತಾನೆ ಎಂಬ ಕುತೂಹಲ ಮಾತ್ರ ಇನ್ನು ಬಾಕಿ ಉಳಿದಿದೆ.

ಅಂದ ಹಾಗೆ ಎ.26ರಂದು ಶುಕ್ರವಾರ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾರ್ವತ್ರಿಕ ರಜೆ ಇರುದರಿಂದ ಎಲ್ಲರೂ ತಮ್ಮ ಮೂಲಭೂತ ಹಕ್ಕು ಹಾಗೂ ಕರ್ತವ್ಯವನ್ನು ಪಾಲಿಸಿ ತಪ್ಪದೆ ಮತದಾನ ಮಾಡಿ ಎಂಬುದು ಕೋಸ್ಟಲ್ ಬುಲೆಟಿನ್ ಕಳಕಳಿ.

Leave a Comment