ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಚಾರ ಇತ್ತೀಚೆಗೆ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದರಲ್ಲಿ (KSRTC Bus) ಅಂಥದ್ದೇ ವಿಲಕ್ಷಣ ವಿದ್ಯಮಾನ ನಡೆದಿದೆ. ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಹುಬ್ಬಳ್ಳಿ (Hubballi) ತಲುಪಿದಾಗ ಘಟನೆ ನಡೆದಿದೆ. ನಾನ್ ಎಸಿ ಸ್ಲೀಪರ್ ಬಸ್ ಅನ್ನು ಹುಬ್ಬಳ್ಳಿ ಸಮೀಪದ ಕಿರೇಸೂರು ಢಾಬಾದಲ್ಲಿ ನಿಲುಗಡೆ ಮಾಡಲಾಗಿತ್ತು. ಆಗ ಯುವತಿ ಸೀಟ್ ನ ಬಳಿ ಬಂದ ಸುಮಾರು 32 ವರ್ಷ ವಯಸ್ಸಿನ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದಾನೆ. ವಿಚಲಿತಗೊಂಡ ಯುವತಿ ಕಿರುಚಿದ್ದಾರೆ. ಇದನ್ನು ಕೇಳಿದ ಸಹ ಪ್ರಹಯಾಣಿಕರು, ಬಸ್ ಸಿಬ್ಬಂದಿ ಅತ್ತ ಧಾವಿಸಿ ಯುವಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆತನನ್ನು ಅಲ್ಲಿಯೇ ಕೆಳಗಳಿಸಿ ಪ್ರಯಾಣ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯುವತಿಯು ಪೊಲೀಸರಿಗೆ ದೂರು ನೀಡಲು ನಿರಾಕರಿಸಿದರು. ಹೀಗಾಗಿ ಪ್ರಯಾಣವನ್ನು ಮುಂದುವರಿಸಿದೆವು ಎಂದು ಕೆಎಸ್ ಆರ್ ಟಿಸಿ ಸಿಬ್ಬಂದಿ ತಿಳಿಸಿದ್ದಾರೆ.
ಯುವತಿಯು ಆಸನ ಸಂಖ್ಯೆ 3ರಲ್ಲಿ ಇದ್ದರು. ಯುವಕ 28-29 ಸಂಖ್ಯೆಯ ಆಸನದಲ್ಲಿದ್ದ. ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿರುವುದಾಗಿಯೂ, ತಾನು ಮೆಕ್ಯಾನಿಕಲ್ ಎಂಜಿನಿಯರ್ ಎಂದು ತಿಳಿಸಿರುವುದಾಗಿಯೂ ಸಹ ಪ್ರಯಾಣಿಕರು ಹೇಳಿದ್ದಾರೆ. ಈ ವಿಚಾರ ಇನ್ನಷ್ಟೇ ದೃಢಪಡಬೇಕಿದೆ. ಯುವಕ ಮದ್ಯಪಾನದ ಅಮಲಿನಲ್ಲಿದ್ದ ಎಂದೂ ಕೆಲವು ಮೂಲಗಳು ಹೇಳಿವೆ. ಘಟನೆ ನಡೆದ ಕೂಡಲೇ ಬ್ಯಾಗ್ ಮತ್ತು ಆಸನವನ್ನು ಶುಚಿಗೊಳಿಸಿದ ಸಿಬ್ಬಂದಿ, ಘಟನೆಯಿಂದಾಗಿ ಆಘಾತಗೊಂಡಿದ್ದ ಯುವತಿಗೆ ಸುರಕ್ಷತೆ ಒದಗಿಸುವ ಭರವಸೆ ನೀಡಿದರು.
ಈ
ವರದಿಯ ಕುರಿತು ರಾಜ್ಯ ಸಾರಿಗೆ ಸಂಸ್ಥೆ ಸ್ಪಷ್ಟಿಕರಣ ನೀಡಿದೆ.
ಆರೋಪಿ ಯುವಕ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಮೂತ್ರ ಮಾಡಿಲ್ಲ. ಬದಲಾಗಿ ಪಾನಮತ್ತನಾಗಿದ್ದ ಆರೋಪಿ ಯುವತಿ ಬಸ್ ಹತ್ತುತ್ತಿದ್ದ ವೇಳೆ ಸೀಟ್ ನಂಬರ್ ಮೂರರ ಮೇಲೆ ಮೂತ್ರ ಮಾಡುತ್ತಿದ್ದ. ಇದನ್ನು ಗಮನಿಸಿದ ಯುವತಿ,ಸಿಬ್ಬಂದಿಯ ಗಮನಕ್ಕೆ ತಂದಳು. ತಕ್ಷಣ ಚಾಲಕ ಮತ್ತು ನಿರ್ವಾಹಕ ನೀರಿನಿಂದ ಸೀಟ್ ತೊಳೆದು ಶುಚಿಗೊಳಿಸಿದರು. ಯುವತಿಗೆ ಪರ್ಯಾಯ ಸೀಟ್ ನ ವ್ಯವಸ್ಥೆ ಮಾಡಿದ್ದರು.














