ಬಂಟ್ವಾಳ: ಬದುಕಿನಲ್ಲಿ ಶಿಕ್ಷಣ ಮತ್ತು ಹಣ ಎರಡೂ ಮುಖ್ಯ. ಅವರೆಡರಿಂದ ಮಾತ್ರ ಸಮುದಾಯದ ಪ್ರಗತಿ ಸಾಧ್ಯ ಎಂದು ಅರಿತ ಅಮ್ಮೆಂಬಳ ಸುಬ್ಬರಾವ್ ಪೈ ಕೆನರಾ ಶಿಕ್ಷಣ ಸಂಸ್ಥೆಗಳು ಮತ್ತು ಕೆನರಾ ಬ್ಯಾಂಕ್ ಆರಂಭಿಸುವ ಮೂಲಕ ನಾಡಿಗೆ ಅನನ್ಯ ಕೊಡುಗೆ ನೀಡಿದ 'ಕರ್ನಾಟಕ ರತ್ನ' ಎಂದು ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು. ಅವರು ಬುಧವಾರ ಪೂರ್ವಾಹ್ನ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಡಾ.ಪಿ. ದಯಾನಂದ ಪೈ, ಪಿ. ಸತೀಶ್ ಪೈ ಅಡಿಟೋರಿಯಂ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕೆನರಾ ಶಿಕ್ಷಣ ಸಂಸ್ಥೆಗಳು ಇದೀಗ ಸ್ವಾಯತ್ತೆಯ ಮಟ್ಟಕ್ಕೆ ತಲುಪಿರುವುದು ಶ್ಲಾಘನೀಯ ಎಂದ ಶ್ರೀಗಳವರು ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ಆರಂಭಕ್ಕೆ ಪೂರ್ವಭಾವಿಯಾಗಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವುದು ಉತ್ತಮ ಎಂದರು. ಶಿಕ್ಷಣದಿಂದ ಜ್ಞಾನ ಸಂಪಾದನೆಯೇ ಮುಖ್ಯವಾಗಬೇಕೇ ಹೊರತು ಅಂಕಗಳಿಕೆಯಲ್ಲ. ಭಾರತೀಯ ಸಂಸ್ಕೃತಿ ಪ್ರೀತಿ, ದೇಶ ಪ್ರೇಮ, ಸೇವೆಯ ತುಡಿತದೊಂದಿಗೆ ಯುವ ಸಮೂಹ ದೇಶಾಭಿಮಾನದ ಸ್ಥಂಭಗಳಾಗಬೇಕಿದೆ ಎಂದವರು ಅಭಿಪ್ರಾಯಪಟ್ಟರು.
ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ ಕೆನರಾ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಮೂಲಕ ಬಹಳಷ್ಟು ಅವಕಾಶಗಳ ಬದುಕನ್ನು ಯುವಜನತೆಗೆ ಒದಗಿಸುತ್ತಿವೆ. ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಸಂಸ್ಥೆಯ ಚಿಂತನೆಯಿಂದ ಅಧ್ಬುತ ಪ್ರಗತಿ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕೆನರಾ ಶಿಕ್ಷಣ ಸಮೂಹ ಸಂಸ್ಥೆಗಳು ಮೆಡಿಕಲ್, ಕಾನೂನು ಕಾಲೇಜುಗಳನ್ನೂ ಆರಂಭಿಸಿದರೆ ಅದರಿಂದ ಕರಾವಳಿಯ ಜನತೆಗೆ ಲಾಭವಾಗಲಿದೆ ಎಂದರು.
ಶ್ರೀಮತಿ ಮೋಹಿನಿ ಡಿ. ಪೈ, ಪಿ.ಸತೀಶ್ ಪೈ, ಪಿ. ಸಬಿತಾ ಎಸ್. ಪೈ , ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಿ.ವಾಸುದೇವ ಕಾಮತ್ , ಉಪಾಧ್ಯಕ್ಷ ಎಸ್ ಸುರೇಶ್ ಕಾಮತ್ , ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್, ಜತೆ ಕಾರ್ಯದರ್ಶಿ ಟಿ.ಗೋಪಾಲಕೃಷ್ಣ ಶೆಣೈ, ಕೋಶಾಧಿಕಾರಿ ವಾಮನ್ ಕಾಮತ್ ಸಹಿತ ಆಡಳಿತ ಮಂಡಳಿಯ ಸದಸ್ಯರು, ಮಾಜಿ ಸದಸ್ಯರು, ಕಾಲೇಜು ಆಡಳಿತ ಕೌನ್ಸಿಲ್ ಸದಸ್ಯರು, ಸಹ ಸಂಸ್ಥೆಗಳ ಮುಖ್ಯಸ್ಥರು, ಕಾಲೇಜು ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್ , ಡೀನ್ಸ್, ವಿಭಾಗ ಮುಖ್ಯಸ್ಥರುಗಳ ಸಹಿತ ಬೋಧಕ, ಬೋಧಕೇತರರು ಉಪಸ್ಥಿತರಿದ್ದರು.
ಸಹ ಕೋಶಾಧಿಕಾರಿ ಎಂ. ಜಗನ್ನಾಥ ಕಾಮತ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಮಂಗಳೂರು ಮೊಕ್ಕಾಂನಿಂದ ಚಿತ್ತೈಸಿದ ಶ್ರೀಗಳವರನ್ನು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಆಡಳಿತ ಮಂಡಳಿ ವತಿಯಿಂದ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಪರಮ ಗುರು ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಅಂಗವಾಗಿ ನಡೆದಿರುವ ಪಾದುಕಾ ದಿಗ್ವಿಜಯ ಯಾತ್ರೆಯನ್ನೂ ಸ್ವಾಗತಿಸಲಾಯಿತು. ವೈದಿಕ ಕಾರ್ಯಕ್ರಮಗಳು, ಶ್ರೀಗಳವರಿಂದ ದ್ವಾರ ಪೂಜೆ, ಲಕ್ಷ್ಮೀ ಪೂಜೆ, ಫಲಕ ಅನಾವರಣ, ದೀಪ ಪ್ರಜ್ವಲನ, ಸಭಾ ಭವನದ ದಾನಿಗಳು, ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಿದರು. ಗುರು ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ
ಅಂಗವಾಗಿ ಶ್ರೀ ಸುಧೀಂದ್ರ ಫಲೋದ್ಯಾನ ನಿರ್ಮಾಣಕ್ಕೆ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಂಗಳೂರಿನ ಶ್ರೀ ವೀರ ವೆಂಕಟೇಶ ಭಜನಾ ಮಂಡಳಿಯವರಿಂದ ಸಂಕೀರ್ತನಾ ಸೇವೆ ನಡೆಯಿತು.
ಕೆನರಾ ಶಿಕ್ಷಣ ಸಮೂಹ ಮೆಡಿಕಲ್ ಕಾಲೇಜು ಆರಂಭಿಸಲು ಕೋಟಿಗಳ ವಾಗ್ದಾನ!
ಶಿಕ್ಷಣ ರಂಗದಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳಿಗೆ 134 ವರ್ಷಗಳ ಹಿರಿಮೆಯಿದೆ. ಕೆನರಾ ಬ್ಯಾಂಕು ಅಂತರಾಷ್ಟ್ರೀಯ ಮನ್ನಣೆ ಪಡೆದು ಮುನ್ನಡೆಯುತ್ತಿದೆ. ಶಿಕ್ಷಣರಂಗದಲ್ಲಿ ಕೆನರಾ ಇನ್ನಷ್ಟು ಬೆಳೆಯಬೇಕು. ವಿಶೇಷವಾಗಿ ಮೆಡಿಕಲ್ ಮತ್ತು ಲಾ ಕಾಲೇಜುಗಳನ್ನು ಆರಂಭಿಸುವ ನಿಟ್ಟಿನಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಬೇಕಿದೆ. ಮೆಡಿಕಲ್ ಕಾಲೇಜು ಶಿಕ್ಷಣಕ್ಕೆ ಮೂಲ ಭೂತ ಕಟ್ಟಡ, ಆಸ್ಪತ್ರೆ, ಹೀಗೆ ಬಹಳಷ್ಟು ಆರ್ಥಿಕ ಸವಾಲುಗಳಿವೆ. ಆದರೆ ನನ್ನ ಕೆನರಾ ಶಿಕ್ಷಣ ಸಂಸ್ಥೆ ಮೆಡಿಕಲ್ ಕಾಲೇಜು ಆರಂಭಿಸಲು ನಿರ್ಧರಿಸಿದರೆ ಮೂಲ ಸೌಲಭ್ಯಗಳ ಅಗತ್ಯ ಪೂರೈಸಲು 50 ಕೋಟಿ ರೂ ಕೊಡುಗೆ ನೀಡುವುದಾಗಿ ದಾನಿ ಡಾ. ಪಿ. ದಯಾನಂದ ಪೈ ಅಭಿಮಾನದಿಂದ ಪ್ರಕಟಿಸಿದರು. ಒಂದೆರಡು ವರ್ಷಗಳ ಒಳಗೆ ತ್ವರಿತವಾಗಿ ಈ ಕುರಿತ ಪ್ರಗತಿಯಾಗಲಿ ಎಂದು ಹಾರೈಸಿದ ಅವರು ಇದರಿಂದ ಕರಾವಳಿ ಕರ್ನಾಟಕದ ಜನತೆಗೆ ಲಾಭವಾಗಲಿದೆ ಎಂದರು. ಕೆನರಾ ಹೈಸ್ಕೂಲ್ ನನ್ನ ಬದುಕು ರೂಪಿಸಿದೆ. ಇಲ್ಲಿ ನನಗೆ ತೀರಿಸಲಾಗದ ಋಣವಿದೆ ಎಂದವರು ಭಾವುಕರಾಗಿ ನುಡಿದರು.
ಕೆನರಾ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿ ಸಾಧಕ ಉದ್ಯಮಿಯಾಗಿ ನಿರಂತರ ಬೆಳೆದು ದಯಾನಂದ ಪೈ, ಸತೀಶ್ ಪೈ ಸಹೋದರರು ಕೆನರಾ ಶಿಕ್ಷಣ ಸಂಸ್ಥೆಗಳಿಗೆ ಸದಾ ಉದಾರ ದೇಣಿಗೆಗಳನ್ನು ನೀಡುತ್ತಲೇ ಬಂದಿದ್ದಾರೆ. ಈ ಬಾರಿ ನೂತನ ಆಡಿಟೋರಿಯಂ, ಇನ್ನೀಗ ಮೆಡಿಕಲ್ ಕಾಲೇಜಿಗೆ ಅಗತ್ಯವಿರುವ ಆಸ್ಪತ್ರೆ, ಕಟ್ಟಡ ನಿರ್ಮಾಣಕ್ಕೆ ಮುಂದಾಗುವುದಾದರೆ 50ಕೋಟಿ ರೂ ಭಾರೀ ಮೊತ್ತದ ದೇಣಿಗೆ ಘೋಷಿಸಿರುವುದು ಗಮನಾರ್ಹವಾಗಿದೆ.















