ಬಂಟ್ವಾಳ: ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಸಹಿತ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಮನೆಮನೆಗೆ ತಲುಪಿಸಿ. ಇದರೊಂದಿಗೆ ಉದ್ಯೋಗ ಸೃಷ್ಟಿಯ ಕೆಲಸವೂ ಜಿಲ್ಲೆಯಲ್ಲಿ ನಡೆಸಲಾಗುವುದು. ಮಾತ್ರವಲ್ಲ, ನಿಮ್ಮ ಸಮಸ್ಯೆಗಳ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಹೇಳಿದರು.
ಅವರು ಎ 18ರಂದು ಬಿ.ಸಿ.ರೋಡಿನ ಕೈಕಂಬದಿಂದ ನಡೆದ ರೋಡ್ ಶೋ ಬಳಿಕ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ದ.ಕ. ಜಿಲ್ಲೆಯಲ್ಲಿ 40 ವರ್ಷಗಳಲ್ಲಿ ಕಾಂಗ್ರೆಸ್ ಸಂಸದರ ಅವಧಿಯಲ್ಲಿ ವಿಮಾನ ನಿಲ್ದಾಣ, ನವಮಂಗಳೂರು ಬಂದರು, ಎನ್ಐಟಿಕೆ, ರೈಲು ನಿಲ್ದಾಣಗಳು, ಎಂಆರ್ಪಿಎಲ್, ಎಂಸಿಎಫ್, ಕೆಐಒಸಿಎಲ್, ಬೃಹತ್ ಕೈಗಾರಿಕೆಗಳು ಅನುಷ್ಠಾನಗೊಂಡಿವೆ.ಕಳೆದ 33 ವರ್ಷಗಳಲ್ಲಿ ಬಿಜೆಪಿ ಸಂಸದರುಗಳು ಮಾಡಿರುವ ಸಾಧನೆ ಏನು..? ಎಂದು ಕೇಳಿದರೆ ಉತ್ತರವೇ ಇಲ್ಲ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳೇ ಈ ಬಾರಿ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ ಹೇಳಿದರು.
ಬಿಜೆಪಿಗೆ ಪ್ರಸ್ತುತ ಏಕಾಏಕಿ ನಾರಾಯಣ ಗುರುಗಳು ನೆನಪಾಗಿದೆ. ಪ್ರಧಾನಿಗಳನ್ನೇ ಮಂಗಳೂರಿಗೆ ಕರೆಸಿ ಗುರುಗಳಿಗೆ ಮಾಲಾರ್ಪಣೆ ಮಾಡಿಸುವ ಕೆಲಸ
ಮಾಡುತ್ತಾರೆ,'ಕಳೆದ ಬಾರಿ ಪಠ್ಯಪುಸ್ತಕ ವಿಚಾರ, ಗಣರಾಜ್ಯೋತ್ಸವ ಟ್ಯಾಬ್ಲೆ ವಿಚಾರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದ ಬಿಜೆಪಿ ಪ್ರಸ್ತುತ ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆ ಕಂಡುಬಂದಿದ್ದು, ಬಿಜೆಪಿಗೆ ಸೋಲುವ ಭೀತಿ ಹುಟ್ಟಿ ಅಪಪ್ರಚಾರದ ತಂತ್ರಗಾರಿಕೆಯನ್ನು ಆರಂಭಿಸಿದ್ದಾರೆ ಎಂದು ಪದ್ಮರಾಜ್ ಆರ್.ಪೂಜಾರಿ ಹೇಳಿದರು.
ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ನಾಯಕರಾದ ಅಶ್ವನಿ ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮಹಮ್ಮದ್, ಬೇಬಿ ಕುಂದರ್, ಬಿ. ಪದ್ಮಶೇಖರ್ ಜೈನ್, ಅಬ್ಬಾಸ್ ಆಲಿ, ಸುದರ್ಶನ್ ಜೈನ್, ಮೋಹನ್ ಗೌಡ ಕಲ್ಲಂಜ, ಕೆ. ಸಂಜೀವ ಪೂಜಾರಿ, ಜಯಂತಿ ಪೂಜಾರಿ, ಅನ್ವರ್ ಕರೋಪಾಡಿ, ಪದ್ಮನಾಭ ರೈ, ಜೋಸ್ಟಿನ್ ಡಿ'ಸೋಜಾ, ಇಬ್ರಾಹಿಂ ನವಾಜ್, ಸುರೇಶ್ ಕುಮಾರ್ ನಾವೂರು, ಜಗದೀಶ್ ಕೊಯಿಲ, ನಾರಾಯಣ ನಾಯ್ಕ ವೇದಿಕೆಯಲ್ಲಿದ್ದರು. ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.










