ಮೂಡುಬಿದಿರೆ: ಐ.ಎಂ. ಕೊಟ್ರಯ್ಯ ಎನ್ನುವ ಹೆಸರು ಶೈಕ್ಷಣಿಕ ಕಾಳಜಿಯ ಕೃತಿಗಳ ಮೂಲಕ, ಬಹುಭಾಷಾ ನಿಘಂಟುಗಳ ಮೂಲಕ ಹಲವರಿಗೆ ಪರಿಚಿತ. ಬದುಕಿನುದ್ದಕ್ಕೂ ಪುಸ್ತಕಗಳನ್ನೇ ಪ್ರೀತಿಸಿದ, ಬರೆಹವನ್ನೇ ಉಸಿರಾಡಿದ ಕೊಟ್ರಯ್ಯ ಕನ್ನಡದ ಸಾಹಿತ್ಯ , ಶೈಕ್ಷಣಿಕ ವಲಯಕ್ಕೆ ಅಗತ್ಯವಿದ್ದ ದೊಡ್ಡ ಮಟ್ಟದ 'ಹಳಗನ್ನಡ ಅರ್ಥಕೋಶ'ವೊಂದನ್ನು ಸಂಪಾದಿಸುವ ಕನಸು ಕಂಡವರು. ಅದಕ್ಕಾಗಿ ಹಗಲು ಇರುಳೆನ್ನದೇ ಅಧ್ಯಯನ, ಓಡಾಟ, ಬರವಣಿಗೆ ನಡೆಸಿ ಅರ್ಥಕೋಶದ ಕರಡು ರೂಪಿಸಿದರು. ತನ್ನ ಬಹುನಿರೀಕ್ಷೆಯ ಈ ಅರ್ಥಕೋಶ ಬಿಡುಗಡೆಗೆ ಅದ್ಯಾಕೋ ಕಾಲ ಕೂಡಿ ಬರುವ ಮೊದಲೇ ಕೊಟ್ರಯ್ಯ ವಿಧಿವಶರಾದರು. ಆದರೆ ತನ್ನ ಪತಿಯ ಪರಿಶ್ರಮ, ಕನಸು, ನಿರೀಕ್ಷೆಯ ಅರಿವಿದ್ದ ಅವರ ಪತ್ನಿ ಚಂದ್ರಕಲಾ 900 ಪುಟಗಳ ಈ ಬಹೃತ್ ಕೃತಿ ಪ್ರಕಟಣೆಯ ಬೆನ್ನಟ್ಟಿ ಯಶಸ್ವಿಯಾಗಿದ್ದಾರೆ. ಹಂಪಿಯ ಕನ್ನಡ ವಿವಿಯ ಪ್ರಸಾರಾಂಗ ಇದೀಗ 'ಹಳಗನ್ನಡ ಅರ್ಥಕೋಶ'ವನ್ನು ಪ್ರಕಟಿಸಿದೆ.
ಪುಸ್ತಕ ಪ್ರಿಯ...
ಸಂಪಾದಿಸಿದ್ದನ್ನೆಲ್ಲ ಪುಸ್ತಕ ಖರೀದಿಗೇ ಸುರಿದ ಮೂಲತಃ ದಾವಣಗೆರೆಯವರಾದ ಇಸಾಮುದ್ರಮಠ ಕೊಟ್ರಯ್ಯ ಹಳೆಗನ್ನಡ, ತುಳು ಇಂಗ್ಲೀಷ್ ಸಂಸ್ಕೃತ ಹೀಗೆ ಹನ್ನೊಂದಕ್ಕೂ ಅಧಿಕ ಬಹುಭಾಷಾ ನಿಘಂಟುಕಾರರಾಗಿಯೇ ಪರಿಚಿತರು. ಶೈಕ್ಷಣಿಕ ಕಾಳಜಿಯ 25 ಕ್ಕೂ ಅಧಿಕ ಕೃತಿಗಳನ್ನು ಬರೆದರೂ ಇನ್ನಷ್ಟು ಬರೆಯಬೇಕೆಂಬ ಅವರ ತುಡಿತಕ್ಕಾಗಿ ಮೂರು ದಶಕಗಳ ಸೇವೆಯಲ್ಲಿ ತಾನಿದ್ದ ಗ್ರಂಥಾಲಯ ಸಹಾಯಕ ಹುದ್ದೆಯಿಂದಲೂ ಸ್ವಯಂ ನಿವೃತ್ತಿ ಪಡೆದು ಮತ್ತಷ್ಟು ಬರೆಯತೊಡಗಿದ್ದರು ಕೊಟ್ರಯ್ಯ.ಶೈಕ್ಷಣಿಕ ಕೃತಿಗಳ ಜತೆಗೆ ವಿಶೇಷವಾಗಿ ನಿಘಂಟುಗಳ ರಚನೆಯಲ್ಲೇ ಹೆಚ್ಚಿನ ಒಲವು ಬೆಳೆಸಿಕೊಂಡಿದ್ದ ಅವರು ವಿಶೇಷ ಎಂದರೆ ತುಳುನಾಡಿಗೆ ಬಂದು ಕಲಿತ ತುಳು ಭಾಷೆಯನ್ನೂ ಅರಗಿಸಿಕೊಂಡು ತುಳು ನಿಘಂಟನ್ನೇ ಸಂಪಾದಿಸಿ ತುಳು ಗಾದೆಗಳ ಸಂಗ್ರಹ ಕೃತಿಯನ್ನೂ ಬರೆದ ಮಹಾಸಾಧಕ.
ಅರ್ಥಕೋಶದ ಕನಸು!
ಹತ್ತನೇ ಶತಮಾನದ ಕನ್ನಡದ ಆದಿಕವಿ ಪಂಪನಿಂದ ಹದಿನೇಳನೇ ಶತಮಾನದ ಷಡಕ್ಷರ ಕವಿವರೆಗಿನ ಗದ್ಯ, ಕಾವ್ಯಗಳನ್ನು ಪರಿಶೀಲಿಸಿ ಅಲ್ಲಿ ಉಲ್ಲೇಖಿತ ಪದಗಳಿಗೆ ಅರ್ಥಕೋಶ ರೂಪಿಸುವುದು ಸುಲಭ ಸಾಧ್ಯವಿಲ್ಲದ ಕೆಲಸ. ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾಥರ್ಿಗಳು ಮತ್ತು ಶಿಕ್ಷಕರಿಗೊಂದು ಉಪಯುಕ್ತ ಹಳಗನ್ನಡ ಅರ್ಥ ಕೋಶ ಕಟ್ಟಿಕೊಡುವ ಯೋಚನೆ ಹೊಳೆದದ್ದೇ ಕೊಟ್ರಯ್ಯ ಮತ್ತೆ ಓದು ಬರೆಹದಲ್ಲೇ ಕಾಲ ಕಳೆದರು. ಬರೋಬ್ಬರಿ ಐವತ್ತು ಸಾವಿರ ಪದಗಳಿಗೆ ಅರ್ಥ ಶೋಧಿಸಿ ಅಕಾರಾದಿಯಾಗಿ ಸಂಕಲಿಸಿದರು. ಕೊಟ್ರಯ್ಯ ಅವರ ಸಾಹಿತ್ಯ ಸಾಮಥ್ರ್ಯದ ಅರಿವಿದ್ದ ಹಂಪಿ ವಿಶ್ವವಿದ್ಯಾನಿಲಯದ ಪ್ರಸಾರಾಂಗ ಇದರ ಪ್ರಕಟಣೆಗೂ ಮುಂದಾಯಿತು. ಐದು ವರ್ಷಗಳ ಹಿಂದೆ ಕೆಲಸ ಮುಗಿಸಿ ಕೊಟ್ಟರೂ ಕೊಟ್ರಯ್ಯ ಅವರ ಬಹು ನಿರೀಕ್ಷೆಯ ಕನಸಿನ ಅರ್ಥಕೋಶ ಪ್ರಕಟಣೆ ಅದ್ಯಾಕೋ ವಿಳಂಬವಾಗುತ್ತಲೇ ಹೋಯಿತು.
ಎರಡು ವರ್ಷಗಳ ಹಿಂದೆ ಕೊಟ್ರಯ್ಯ ವಿಧಿವಶರಾದರು. ಆದರೆ ಕೊಟ್ರಯ್ಯ ಅವರ ಕನಸು, ಅದಕ್ಕಾಗಿ ಅವರು ಪಟ್ಟ ಪರಿಶ್ರಮ, ಇಟ್ಟುಕೊಂಡ
ನಿರೀಕ್ಷೆ ಇವೆಲ್ಲದರ ಅರಿವಿದ್ದ ಪತ್ನಿ ಚಂದ್ರಕಲಾ ಪತಿಯ ಅಗಲಿಕೆಯ ನೋವಿನ ನಡುವೆಯೂ ಅರ್ಥಕೋಶವನ್ನು ಮರೆಯಲಿಲ್ಲ. ವಿವಿಯ ಪ್ರಸಾರಾಂಗದ ಬೆನ್ನು ಬಿದ್ದು ಇದ್ದ ಅಡೆತಡೆಗಳನ್ನೆಲ್ಲ ನಿವಾರಿಸಿಕೊಳ್ಳಲು ಮುಂದಾದರು. ಅಸಾಧ್ಯವೆಂದಾರೆ ಹಸ್ತಪ್ರತಿ ಕೊಡಿ ನಾವೇ ಹಣ ಹೊಂದಿಸಿ ಪ್ರಕಟಿಸುತ್ತೇವೆ ಎನ್ನುವುದಕ್ಕೂ ಹಿಂಜರಿಯಲಿಲ್ಲ. ಆದರೆ ಅದಾಗಲೇ ನಿರ್ಧರಿಸಿದಂತೆ ವಿವಿಯ ಪ್ರಸಾರಾಂಗ ಕೊನೆಗೂ ಈ ಮಹತ್ವದ ಅರ್ಥಕೋಶವನ್ನೀಗ ಪ್ರಕಟಿಸಿದೆ.
ಕೊನೆಗೂ ನನ್ನ ಪತಿಯವರ ಕನಸು ನನಸಾಗಿಸಿದ ತೃಪ್ತಿ ಇದೆ. ಅವರಿದ್ದರೆ ಅದರ ಸಂಭ್ರಮವೇ ಬೇರೆ. ಆದರೆ ಈ ಮೂಲಕ ಅವರ ಆತ್ಮ ಸದ್ಗತಿಗಾಗಿ ಕೃತಿನಮನ ಸಲ್ಲಿಸಿದ ಧನ್ಯತೆಯಿದೆ ಎನ್ನುತ್ತಾರೆ ಕೊಟ್ರಯ್ಯ ಅವರ ಪತ್ನಿ ವಿಶ್ರಾಂತ ಶಿಕ್ಷಕಿ ಚಂದ್ರಕಲಾ ಎಸ್.ಎಸ್. ಅಂದಿನಿಂದ ಇಂದಿನವರೆಗೂ ಸಹಕರಿಸಿದ ಪ್ರಸಾರಾಂಗದ ವಿಶ್ರಾಂತ ಸಹಾಯಕ ನಿದರ್ೇಶಕ ಸಿ.ಸಿ.ಪೂವಯ್ಯ ಅವರ ವಿಶೇಷ ಪರಿಶ್ರಮವನ್ನು ನೆನಪಿಸಿಕೊಂಡಿದ್ದಾರೆ. ಈ ಮಧ್ಯೆ ಈ ಕೃತಿಯ ನಿರೀಕ್ಷೆಯಲ್ಲಿದ್ದ ಬಹುಮಂದಿಯ ಜತೆಗೆ ಕೊಟ್ರಯ್ಯ ಅವರ ಬಂಧುಗಳು ಹಿತೈಶಿಗಳು ಈ ಬೆಳವಣಿಗೆಯನ್ನು ಸಂತಸದಿಂದ ಸ್ವಾಗತಿಸಿದ್ದಾರೆ. ಕೊಟ್ರಯ್ಯ ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರ ಕನಸಿನ ಹಳಗನ್ನಡ ಅರ್ಥಕೋಶದ ಪ್ರತೀ ಪುಟಗಳಲ್ಲಷ್ಟೇ ಅಲ್ಲ ಪದಗಳಲ್ಲೂ ಅವರ ಪರಿಶ್ರಮ, ಧನ್ಯತೆಯ ಛಾಯೆ ಆವರಿಸಿರುವುದಂತೂ ನಿಜ.
ಕನ್ನಡ ಸಾಹಿತ್ಯಲೋಕದಲ್ಲಿ ಹಳಗನ್ನಡ ಅರ್ಥಕೋಶದಂತಹ ಕೆಲಸಗಳು ವಿರಳ. ಅದರಲ್ಲೂ ಹಂಪಿ ವಿ.ವಿ ಇಂತಹದ್ದೊಂದು ಸಾಹಸಕ್ಕೆ ಕೈಹಾಕಿರುವುದು ಇದೇ ಮೊದಲು. ಈ ಅರ್ಥಕೋಶವನ್ನು ರೂಪಿಸುವಲ್ಲಿ ಕೊಟ್ರಯ್ಯ ಅವರ ಆಸಕ್ತಿ, ಪರಿಶ್ರಮ, ಕೊಡುಗೆ ಏಕವ್ಯಕ್ತಿ ಸಾಹಸ ಅನನ್ಯವಾದದ್ದು. ಪತ್ರ ವ್ಯವಹಾರ ದೂರವಾಣಿಯಲ್ಲೇ ಸಂಪರ್ಕದಲ್ಲಿದ್ದ ನಾವು ಈ ಅವಧಿಯಲ್ಲಿ ಪರಸ್ಪರ ಭೇಟಿಯಾಗಿದ್ದೇ ಇಲ್ಲ. ಅವರಿಲ್ಲ ಎನ್ನುವ ನೋವಿನ ನಡುವೆಯೂ ಅರ್ಥಕೋಶದಲ್ಲೇ ಅವರನ್ನು ಕಾಣುತ್ತಿದ್ದೇವೆ. - ಸಿ.ಸಿ.ಪೂವಯ್ಯ , ಹಂಪಿ ವಿವಿ ಪ್ರಸಾರಾಂಗದ ವಿಶ್ರಾಂತ ಸಹಾಯಕ ನಿರ್ದೇಶಕರು.















